ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪದ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್ ಕುಮಾರ್ ಅವರ ಅಮಾನತು ಆದೇಶವನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್ಎಟಿ) ಗುರುವಾರ ತಡೆಹಿಡಿದಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
'ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ, ಪಿಡಿಒ ಪ್ರವೀಣ್ ಕುಮಾರ್ ಅವರ ಮೇಲೆ ಹೇರಲಾಗಿದ್ದ ಏಕಪಕ್ಷೀಯ ಅಮಾನತು ಆದೇಶವನ್ನು, ಮಾನ್ಯ ಕೆಎಸ್‌ಎಟಿ ಮುಂದೆ ನಮ್ಮ ಕಚೇರಿಯ ಕಾನೂನು ತಂಡ ಪ್ರಶ್ನಿಸಿತ್ತು. ರಾಜಕೀಯ ಒತ್ತಡದಿಂದ ಮಾಡಲಾಗಿದ್ದ ಅಮಾನತು ಆದೇಶಕ್ಕೆ ಇಂದು ಕೆಎಸ್‌ಎಟಿ ತಡೆ ನೀಡಿದೆ.' ಎಂದು ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಯಾವುದೇ ರೀತಿಯ ಬೆದರಿಕೆಯು, ಆರ್‌ಎಸ್‌ಎಸ್‌ನ ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ತಡೆಯಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ಕಾಂಗ್ರೆಸ್ ಸರ್ಕಾರಕ್ಕೆ ನೀಡಿದಂತಾಗಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಈ ಸಂದರ್ಭದಲ್ಲಿ ಸಹಕಾರ ನೀಡಿರುವ ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿ ಅವರಿಗೆ ಧನ್ಯವಾದಗಳು' ಎಂದು ಅವರು ಹೇಳಿದರು.
ಈ ತಿಂಗಳ ಆರಂಭದಲ್ಲಿ, ಅಕ್ಟೋಬರ್ 12 ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಸಂಘಟನೆಯ ಸಮವಸ್ತ್ರ ಧರಿಸಿ ಭಾಗವಹಿಸಿದ್ದಕ್ಕಾಗಿ ಸಿರ್ವಾರ್ ತಾಲ್ಲೂಕಿನಲ್ಲಿ ನಿಯೋಜಿತರಾಗಿರುವ ಪ್ರವೀಣ್ ಕುಮಾರ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಮಾನತುಗೊಳಿಸಿತ್ತು.
ಬಳಿಕ ಪ್ರವೀಣ್ ಕುಮಾರ್ ಅವರೊಂದಿಗೆ ಮಾತನಾಡಿದ್ದ ತೇಜಸ್ವಿ ಸೂರ್ಯ, 'ಕಾನೂನುಬಾಹಿರ ಅಮಾನತು' ಅನ್ನು ಪ್ರಶ್ನಿಸಲು ಸಂಬಂಧಪಟ್ಟ ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳ ಮುಂದೆ ವೈಯಕ್ತಿಕವಾಗಿ ಹಾಜರಾಗುವುದಾಗಿ ಭರವಸೆ ನೀಡಿದ್ದರು. ಸರ್ಕಾರಿ ನೌಕರರು ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಕ್ಕನ್ನು ಎತ್ತಿಹಿಡಿದಿರುವ ಹಲವಾರು ಹೈಕೋರ್ಟ್‌ಗಳ ತೀರ್ಪುಗಳಿವೆ ಎಂದು ಬಿಜೆಪಿ ಸಂಸದರು ಹೇಳಿದ್ದರು.