ಮಂಗಳೂರು: ಧರ್ಮಸ್ಥಳ 'ಬುರುಡೆ' ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಆ ಒಂದು ಬುರುಡೆ ಧರ್ಮಸ್ಥಳದಲ್ಲಿ (Dharmasthala Case) ನೂರಾರು ಕೊಲೆಗಳು ನಡೆದಿರಬಹುದಾ ಎಂಬ ಊಹಾಪೋಹಗಳು ಹುಟ್ಟಿಕೊಳ್ಳುವಂತೆ ಮಾಡಿತ್ತು. ಆದರೆ ಎಸ್ಐಟಿ ತನಿಖೆಯಲ್ಲಿ ಧರ್ಮಸ್ಥಳ ವಿರುದ್ಧ ನಡೆದ ಒಂದೊಂದೆ ಷಡ್ಯಂತ್ರಗಳು ಹೊರಬರುತ್ತಿವೆ. ವಿಶೇಷ ತನಿಖಾ ತಂಡದ ತನಿಖೆಯ ವೇಳೆ ಬುರುಡೆಯನ್ನು ನಮಗೆ ಕೊಟ್ಟಿದ್ದು ಗಿರೀಶ್ ಮಟ್ಟಣ್ಣನವರ್ (Girish Mattannavar) ಎಂದು ಮತ್ತೊಬ್ಬ ದೂರುದಾರ ಜಯಂತ್ (Jayanth) ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಆರಂಭಿಸಿತ್ತು. ಆದರೆ ಮೊದಲಿಗೆ ಬುರುಡೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಪ್ರಕರಣ ಸಂಬಂಧ ದೂರುದಾರ ಜಯಂತ್ ನನ್ನು ವಿಚಾರಣೆಗೆ ಒಳಪಡಿದ್ದು ವಿಚಾರಣೆ ವೇಳೆ ಬುರುಡೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಜಯಂತ್ ಬುರುಡೆ ತಂದುಕೊಟ್ಟಿದ್ದು ಗಿರೀಶ್ ಮಟ್ಟಣ್ಣನವರ್ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ತೋಟದಿಂದ ಬುರುಡೆ ತಂದು ನ್ಯಾಯಾಲಯಕ್ಕೆ ನೀಡಿರುವ ಅನುಮಾನ ವ್ಯಕ್ತವಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬುರುಡೆ ಜೊತೆ ಇದ್ದ ಮಣ್ಣುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್ ಲ್ಯಾಬ್‌ನಲ್ಲಿ ಧರ್ಮಸ್ಥಳದ ಅಸುಪಾಸಿನಲ್ಲಿ ಇರುವ ಮಣ್ಣಿಗೂ ಬುರುಡೆಯಲ್ಲಿರುವ ಮಣ್ಣಿನ pHಗೂ ಸಾಮ್ಯತೆ ಇಲ್ಲ ಎಂಬ ವಿಚಾರ ದೃಢಪಟ್ಟಿತ್ತು.
ಹೀಗಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯನ ವಿಚಾರಣೆಯನ್ನು ಎಸ್ಐಟಿ ತೀವ್ರಗೊಳಿಸಿತ್ತು. ಆಗ ಚಿನ್ನಯ್ಯ ಸತ್ಯ ಒಪ್ಪಿಕೊಂಡು ಷಡ್ಯಂತ್ರದ ಭಾಗವಾಗಿ ಬುರುಡೆ ತರಲಾಗಿತ್ತು. ಅದನ್ನು ತಿಮರೋಡಿ ತೋಟದಿಂದ ತಂದಿರುವುದಾಗಿ ಚಿನ್ನಯ್ಯ ಹೇಳಿದ್ದನು. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ತಿಮರೋಡಿ ನಿವಾಸಕ್ಕೆ ಮಹಜರು ಮಾಡಲು ಬಂದಿದ್ದಾಗ ಚಿನ್ನಯ್ಯ ರಬ್ಬರ್ ತೋಟದ ಒಂದು ಜಾಗವನ್ನು ತೋರಿಸಿ ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದನು. ಈತನ ಹೇಳಿಕೆಯಂತೆ ಪೊಲೀಸರು ರಬ್ಬರ್ ತೋಟದಿಂದ ಮಣ್ಣುಗಳನ್ನು ತೆಗೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಇದೀಗ ಎಫ್ಎಸ್ಎಲ್ ವರದಿ ಮೇಲೆ ಈ ಪ್ರಕರಣ ನಿಂತಿದೆ.
ಬುರುಡೆ ಪ್ರಕರಣದಲ್ಲಿ ಪದೇ ಪದೇ ಗಿರೀಶ್ ಮಟ್ಟಣ್ಣನವರ್ ಅವರ ಹೆಸರು ಕೇಳಿಬಂದಿದ್ದರಿಂದ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ಅಧಿಕೃತ ನೋಟಿಸ್ ನೀಡಿತ್ತು. ಇಂದು ಗಿರೀಶ್ ಮಟ್ಟಣ್ಣವರ್ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಹಾಜರಾಗಿದ್ದು ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ. ಬುರುಡೆ ಚಿನ್ನಯ್ಯ ವಿಚಾರಣೆ ಸಂದರ್ಭದಲ್ಲಿ ಆತ ಹೇಳಿರುವ ಕೆಲವು ಸೂಕ್ಷ್ಮ ವಿಷಯಗಳ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಗಿರೀಶ್ ಹಾಜರಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ.