ಕಲಬುರಗಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಷಡ್ಯಂತ್ರ ನಡೆದಿತ್ತು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಮಂಗಳವಾರ ಆರೋಪಿಸಿದ್ದಾರೆ,
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅವರ ಅರಿವಿಗೆ ಬಾರದೆ ಅನೇಕರ ಹೆಸರುಗಳನ್ನು ಅಳಿಸುವಂತೆ ಚುನಾವಣಾ ಆಯೋಗಕ್ಕೆ ನಕಲಿ ಇಮೇಲ್‌ಗಳನ್ನು ಕಳುಹಿಸಲಾಗಿದೆ. ಈ ಮತ ಕಳ್ಳತನ ವಿವಾದದ ಕುರಿತು ಆರಂಭಿಸಲಾದ ತನಿಖೆ ಇನ್ನೂ ಮುಕ್ತಾಯಗೊಂಡಿಲ್ಲ. ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದೆ, ಆದರೆ ಚುನಾವಣಾ ಆಯೋಗವು ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಕಲಿ ಮೇಲ್‌ಗಳನ್ನು ಕಳುಹಿಸಲಾದ ಕಂಪ್ಯೂಟರ್‌ಗಳ ಐಪಿ ವಿಳಾಸಗಳನ್ನು ಚುನಾವಣಾ ಆಯೋಗ ಪತ್ತೆಹಚ್ಚುವುದು ಕಷ್ಟಕರವಾಗಿರುತ್ತದೆ. ಹೀಗಾಗಿ ಪ್ರಕರಣವನ್ನು ಸೈಬರ್ ಅಪರಾಧ ದಳಕ್ಕೆ ಶಿಫಾರಸು ಮಾಡಲಾಗಿದೆ. ಆಳಂದ ಕ್ಷೇತ್ರದಲ್ಲಿ ನಡೆದಿರುವ ಈ ಘಟನೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಮಾಡಿದ ಆರೋಪಕ್ಕೆ ಸಾಕ್ಷಿಯಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಂವಹನ ವಿಭಾಗವು ಕೇಳಿದ ಎಲ್ಲಾ ವಿವರಗಳನ್ನು ನಾನು ನೀಡಿದ್ದೇನೆಂದು ಹೇಳಿದ್ದರೆ.
ಬೆಂಬಲಿಗರನ್ನು ಮತದಾರರಪಟ್ಟಿಯಿಂದ ಅಳಿಸಿ ಹಾಕಲು ನಕಲಿ ಫಾರಂ-7 ಬಳಸಿದ್ದರು. ತೆಗೆದು ಹಾಕಲು ಸಲ್ಲಿಕೆಯಾಗಿದ್ದ 6,018 ಅರ್ಜಿಗಳ ಪೈಕಿ 24 ಅರ್ಜಿಗಳ ಮಾತ್ರವೇ ನೈಜವೆಂದು ಗೊತ್ತಾಗಿತ್ತು. ಉಳಿದಂತೆ 5,994 ಅರ್ಜಿಗಳು ನಕಲಿ ಎಂದು ಗೊತ್ತಾಗಿತ್ತು. ಈಗ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ʼವೋಟ್ ಚೋರಿʼ ಅಭಿಯಾನಕ್ಕೆ ಆಳಂದ ಕ್ಷೇತ್ರದ ಪ್ರಕರಣವೇ ದೊಡ್ಡ ಜೀವಂತ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಈ ಕುರಿತಂತೆ ಆಗಿನ ಚುನಾವಣಾಧಿಕಾರಿ ಮಮತಾ ಕುಮಾರಿ ಅವರು, ಆಳಂದ ವಿಧಾನಸಭಾ ಮತಕ್ಷೇತ್ರದಲ್ಲಿ 254 ಮತಗಟ್ಟೆಗಳಿಂದ 5994 ಮತದಾರರ ಪಟ್ಟಿಯಿಂದ ಮೂಲ ಮತದಾರರ ಗಮನಕ್ಕೆ ಬಾರದೆ ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರುವ ತಪ್ಪಿತಸ್ಥರ ವಿರೋಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರೂ ತಾರ್ಕಿಕ ಅಂತ್ಯ ಕಾಣಲಿಲ್ಲ.
ಹಾಗಾಗಿ ನಮ್ಮ ಸರ್ಕಾರ ಬಂದ ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು. ಸಿಐಡಿಗೂ ಚುನಾವಣಾ ಆಯೋಗವು ನಕಲಿ ಅರ್ಜಿಗಳನ್ನು ಸಲ್ಲಿಸಿದ ಸಾಧನಗಳನ್ನು ಗುರುತಿಸಲು ಅಗತ್ಯವಿರುವ ಡೆಸ್ಟಿನೇಷನ್ ಐಪಿಗಳು ಹಾಗೂ ಪೋರ್ಟ್ ವಿವರಗಳನ್ನು ನೀಡದೆ ಇರುವುದರಿಂದ ತನಿಖೆ ಅಲ್ಲಿಗೆ ನಿಂತು ಹೋಗಿದೆ. ಈಗ ಅದು ಸೈಬರ್ ಕ್ರೈಂ ನಲ್ಲಿ ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.
ಮತದಾರರ ಪಟ್ಟಿಯಿಂದ ಆರು ಸಾವಿರಕ್ಕೂ ಹೆಚ್ಚಿನ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವ ಷಡ್ಯಂತ್ರ ಮಾಡುತ್ತಿರುವುದರ ಹಿಂದೆ ಯಾರ ಕೈವಾಡವಿದೆ ಎಂಬುದರ ಪತ್ತೆ ಹಚ್ಚಬೇಕು. ಈಗಾಗಲೇ ಪ್ರಕರಣ ದಾಖಲಾಗಿದ್ದರೂ ತನಿಖೆಗೆ ಚುನಾವಣಾ ಆಯೋಗ ಯಾಕೆ ಸಹರಿಸುತ್ತಿಲ್ಲ? ಸಂವಿಧಾನ ಬದ್ಧವಾಗಿರುವ ಸಂಸ್ಥೆ ಬಿಜೆಪಿಯನ್ನೇ ಅಧಿಕಾರದಲ್ಲಿ ಕೂರಿಸಲು ಯತ್ನ ಮಾಡುತ್ತಿದೆ ಎಂದ ಅವರು, ಇಂತಹ ಘಟನೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂದು ವಾಗ್ದಾಳಿ ನಡೆಸಿದರು.