ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ-ಅಂಕೋಲಾದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಬಂಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಬೇಲೇಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಸಂಗ್ರಹಿಸಲಾಗಿದ್ದ ಸಾವಿರಾರು ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಕದ್ದು, ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಅರ್ ದಾಖಲಿಸಿಕೊಂಡಿದ್ದ ಇ.ಡಿ ಸಹ ತನಿಖೆ ಆರಂಭಿಸಿತ್ತು. ಇದೇ ಆಗಸ್ಟ್ 13 ಮತ್ತು 14ರಂದು ಸತೀಶ್ ಅವರ ಕಾರವಾರ ಮತ್ತು ಬೆಂಗಳೂರಿನ ಮನೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ರೂ.13 ಕೋಟಿಯಷ್ಟು ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸತೀಶ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಮಂಗಳವಾರ ಸೈಲ್ ಅವರು ಇಡಿಯ ಶಾಂತಿನಗರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಆದಾಗ್ಯೂ, ಅವರು ತನಿಖೆಗೆ ಸಹಕರಿಸದ ಕಾರಣ, ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಬಳಿಕ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯಲಾಯಿತು ಮತ್ತು ನಂತರ ತಡರಾತ್ರಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.