ಬೆಂಗಳೂರು: ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಬೆಂಗಳೂರು ಜಲಮಂಡಳಿಯು ಸೆ.15ರಿಂದ ಮೂರು ದಿನ ನಗರದಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.
ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು ಸೆಪ್ಟಂಬರ್ 15, 16 ಮತ್ತು ಸೆಪ್ಟಂಬರ್ 17ರಂದು ಸ್ಥಗಿತಗೊಳಿಸಲಾಗುತ್ತಿದೆ.
ಈ ಜಲರೇಚಕ ಯಂತ್ರಾಗಾರಗಳ ಸ್ಥಗಿತತೆಯಿಂದ ಇದರ ವ್ಯಾಪ್ತಿಯಿಂದ ಎಲ್ಲೆಲ್ಲಿ ನೀರು ಕಾವೇರಿ ನೀರು ಸರಬರಾಜು ಆಗುತ್ತಿದಿಯೋ ಅಲ್ಲೆಲ್ಲ ಕಡೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ನಗರದ ಜನತೆಗೆ ಯಾವುದೇ ಅಡೆತಡೆಯಿಲ್ಲದೇ ಕುಡಿಯುವ ನೀರನ್ನು ಸರಬರಾಜು ಮಾಡಲು, ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಅವುಗಳ ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯ ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಕಾವೇರಿ 5ನೇ ಹಂತದ ಜಲರೇಚಕ ಯಂತ್ರಾಗಾರಗಳು (ಪಂಪಿಂಗ್ ಸ್ಟೇಶನ್) ಸೆಪ್ಟಂಬರ್ 15ರ ಬೆಳಗ್ಗೆ 1ರಿಂದ ಸೆಪ್ಟಂಬರ್ 17ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳು. ಕಾವೇರಿ ನೀರು ಸರಬರಾಜು ಯೋಜನೆಯ ಹಂತ-1, ಹಂತ-02, ಹಂತ-3, ಹಂತ-4 1ನೇ ಘಟ್ಟ ಮತ್ತು 2ನೇ ಘಟ್ಟಗಳ ಜಲರೇಚಕ ಯಂತ್ರಾಗಾರಗಳನ್ನು ಸೆಪ್ಟಂಬರ್ 16ರ ಬೆಳಗ್ಗೆ 6ರಿಂದ ಸೆಪ್ಟಂಬರ್ 17ರ ಬೆಳಗ್ಗೆ 6ರವರೆಗೆ ಒಟ್ಟು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ.
ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಾಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿರುವ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಕಾವೇರಿ ನೀರು ಸರಬರಾಜಾಗುವ ಪ್ರದೇಶಗಳ ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.