ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಿಚಾರಣೆ ಮುಂದುವರೆದಿದ್ದು, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ ಗೌಡ, ಪ್ರದೀಪ್ ಮತ್ತು ಯೂಟ್ಯೂಬರ್ ಅಭಿಷೇಕ್ ವಿಚಾರಣೆಗೆ ಹಾಜರಾಗಿದ್ದಾರೆ.
ಇದೇ ವೇಳೆ ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಪ್ರಚಾರ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ದೂರು ನೀಡಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ನಿವಾಸಿ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ವೆಂಕಪ್ಪ ಕೋಟ್ಯಾನ್ ದೂರು ದಾಖಲಿಸಿದ್ದಾರೆ. ಮೈಸೂರಿನ ನಿವಾಸಿಯಾಗಿರುವ ಸ್ನೇಹಮಯಿಯನ್ನು ಸೌಜನ್ಯ ಕೊಲೆಗಾರರೇ ಧರ್ಮಸ್ಥಳಕ್ಕೆ ಕರೆಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸೌಜನ್ಯ ಅವರ ಕುಟುಂಬ ಮತ್ತು ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಸ್ನೇಹಮಯಿ ಕೃಷ್ಣ ಎಂಬ ವ್ಯಕ್ತಿ ಯಾರದ್ದೋ ಸೂಚನೆಯ ಮೇರೆಗೆ ವಿಠಲ್ ಗೌಡ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾನೆ, ನಮ್ಮ ಹೋರಾಟವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದ್ದಾನೆ. ಸೌಜನ್ಯ ಅವರ ಕೊಲೆಗಾರರು ದೂರು ದಾಖಲಿಸಲು ಕೃಷ್ಣ ಅವರನ್ನು ಕರೆತಂದಿರಬಹುದು ಎಂದು ನಮಗೆ ಅನುಮಾನ ಬಂದಿದೆ ಎಂದಿದ್ದಾರೆ.
ಸುಳ್ಳು ದೂರು ನೀಡಿರುವ ಆರೋಪಿಯನ್ನು ಕೂಲಂಕುಷವಾಗಿ ತನಿಖೆಗೆ ಒಳಪಡಿಸಬೇಕು. ಈ ರೀತಿ ಸುಳ್ಳು ದೂರು ನೀಡಲು ಪ್ರೇರೇಪಿಸಿರುವವರನ್ನು ಪತ್ತೆಮಾಡಬೇಕು. ಹೋರಾಟಗಾರರಿಗೆ ಅವಮಾನ ಮಾಡಿರುವ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಅವರು ವೀಡಿಯೊ ಬಿಡುಗಡೆ ಮಾಡಿ, ಸೌಜನ್ಯ ಅವರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ದುರ್ಬಲಗೊಳಿಸುವುದನ್ನು ತಡೆಯಲು ಪ್ರಾರ್ಥನೆಗಳನ್ನು ನಡೆಸಲು ಕರೆ ನೀಡಿದ್ದಾರೆ.