ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಂಗಬೆಟ್ಟು ಗ್ರಾಮದಲ್ಲಿ ಸೋಮವಾರ ಪೊಲೀಸರು ಅಕ್ರಮ ಗೋಹತ್ಯೆ ನಡೆಸುತ್ತಿದ್ದುದನ್ನು ತಡೆದು ಒಂಬತ್ತು ಗೋವುಗಳನ್ನು ರಕ್ಷಿಸಿದ್ದು ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನ ಮನೆಯೊಂದರ ಹಿಂದಿನ ಶೆಡ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಚಾಕು ಮತ್ತು ಮಚ್ಚಿನಿಂದ ಗೋವುಗಳನ್ನು ವಧಿಸುತ್ತಿದ್ದ ಗುಂಪೊಂದು ಪತ್ತೆಯಾಗಿದೆ.
ಪೊಲೀಸ್ ತಂಡವನ್ನು ನೋಡಿದ್ದೆ ತಡ ಹೆಚ್ಚಿನ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಸುರತ್ಕಲ್‌ನ ಕೃಷ್ಣಾಪುರದ ತೌಸಿಫ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆಯ ಸಮಯದಲ್ಲಿ, ಈ ಗುಂಪು ಈಗಾಗಲೇ ಆರು ವರ್ಷದ ಕರುವನ್ನು ಪರವಾನಗಿ ಇಲ್ಲದೆ ಹತ್ಯೆ ಮಾಡಿದೆ. ಅಲ್ಲದೆ ವಧೆಗಾಗಿ ಒಂಬತ್ತು ದನಗಳನ್ನು ಕಟ್ಟಿಹಾಕಲಾಗಿತ್ತು ಎಂದು ತಿಳಿದುಬಂದಿದೆ.
ರಕ್ಷಿಸಲಾದ ಪ್ರಾಣಿಗಳನ್ನು ಗೋಶಾಲೆಗೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಬಳಸಲಾಗಿದೆ ಎನ್ನಲಾದ ಆಟೋರಿಕ್ಷಾವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ, ಕರ್ನಾಟಕ ಗೋಹತ್ಯೆ ತಡೆ ಮತ್ತು ಗೋ ಸಂರಕ್ಷಣಾ ಕಾಯ್ದೆ 2020ರ ನಿಬಂಧನೆಗಳು ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತೌಸಿಫ್‌ನನ್ನು ಬಂಟ್ವಾಳ ಎಸಿಜೆಎಂ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತರ ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದರು.