ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮೊನ್ನೆ ಸೋಮವಾರ ರಾಜ್ಯಾದ್ಯಂತ ಪ್ರಾರಂಭಿಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಸಮೀಕ್ಷೆಯಿಂದ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಸಿದ್ದ 14 ಜಾತಿಗಳನ್ನು ತೆಗೆದುಹಾಕಿದೆ.
ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಮತ್ತು ಇತರ ಜಾತಿಗಳನ್ನು ಸಮೀಕ್ಷಾ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆಯೋಗವು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಈ ಜಾತಿಗಳನ್ನು ತೆಗೆದುಹಾಕುವ ನಿರ್ಧಾರವನ್ನು ನಿನ್ನೆ ನಡೆದ ಸಭೆಯಲ್ಲಿ ಆಯೋಗವು ತೆಗೆದುಕೊಂಡಿತು. ಸಲಹೆಗಳನ್ನು ಸ್ವೀಕರಿಸಿದ ನಂತರ, ಈ ಜಾತಿಗಳನ್ನು ಅಂತಿಮ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅವುಗಳನ್ನು ಗಣತಿದಾರರ ಕೈಪಿಡಿಯಿಂದಲೂ ಅಳಿಸಲಾಗಿದೆ ಎಂದು ಹೇಳಿದೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮತ್ತು ವಿ ಸುನಿಲ್ ಕುಮಾರ್ ನೇತೃತ್ವದ ಬಿಜೆಪಿ ನಾಯಕರ ನಿಯೋಗವು ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರನ್ನು ಭೇಟಿ ಮಾಡಿ ಈ ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸದಂತೆ ಒತ್ತಾಯಿಸಿತು.
ಸಭೆಯಲ್ಲಿ, ಕ್ರಿಶ್ಚಿಯನ್ ಟ್ಯಾಗ್ ಹೊಂದಿರುವ 48 ಜಾತಿಗಳಲ್ಲಿ, ಆಯೋಗವು 33 ಜಾತಿಗಳನ್ನು ಸಮೀಕ್ಷಾ ಪಟ್ಟಿಯಿಂದ ತೆಗೆದುಹಾಕಲು ಒಪ್ಪಿಕೊಂಡಿದೆ, ಆದರೆ ಉಳಿದ 15 ಜಾತಿಗಳನ್ನು ಸಹ ಅಳಿಸಬೇಕು ಎಂದು ನಾಯಕರು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳ ನಡುವಿನ ಆಂತರಿಕ ಮೀಸಲಾತಿಗಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನಡೆಸಿದ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಗುರುತನ್ನು ಹೊಂದಿರುವ ಪರಿಶಿಷ್ಟ ಜಾತಿಗಳ 15 ಜಾತಿಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ಬಿಜೆಪಿ ನಾಯಕರು ತಮ್ಮ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ.
ಜಾತಿ ಸಮೀಕ್ಷೆಯಲ್ಲಿ ಈ ಜಾತಿಗಳ ಉಲ್ಲೇಖವು ದೊಡ್ಡ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ಬಿಜೆಪಿ ನಿಯೋಗ ಆಯೋಗಕ್ಕೆ ತಿಳಿಸಿದೆ. ಆಯೋಗದ ಅಧ್ಯಕ್ಷರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಅಂತಹ ಜಾತಿಗಳನ್ನು ಹಿಂದಿನ ಯಾವುದೇ ಸಮೀಕ್ಷೆಗಳಲ್ಲಿ ಉಲ್ಲೇಖಿಸಲಾಗಿಲ್ಲ. ಅವುಗಳನ್ನು ಈಗ ಏಕೆ ಸೇರಿಸಲಾಗಿದೆ, ಇದೆಲ್ಲವೂ ಪಿತೂರಿಯ ಭಾಗವಾಗಿದೆ ಎಂದರು.