ಬೆಂಗಳೂರು: ನಗರದಲ್ಲಿ ಪುಡಿರೌಡಿಗಳ ಗ್ಯಾಂಗ್‌ವೊಂದು ಅಟ್ಟಹಾಸ ಮೆರೆದಿದೆ. ಶಸ್ತ್ರಸಜ್ಜಿತ ದುಷ್ಕರ್ಮಿಗಳ ತಂಡವೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 25 ಕ್ಕೂ ಹೆಚ್ಚು ನಾಲ್ಕು ಚಕ್ರದ ವಾಹನಗಳಿಗೆ ಹಾನಿ ಮಾಡಿದ್ದು, ಸಿಕ್ಕ ಸಿಕ್ಕ ವಾಹಗಿಗೆ ಅಡ್ಡ ಹಾಕಿ ಬೆದರಿಸಿ ಹಣ ಸುಲಿಗೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಮತ್ತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಆಟೋದಲ್ಲಿ ಬಂದಿರುವ 6 ಮಂದಿ ರೌಡಿಗಳು ಬ್ಯಾಡರಹಳ್ಳಿಯ ವಾಲ್ಮೀಕಿನಗರದಲ್ಲಿ 20 ವಾಹನಗಳಿಗೆ ಮತ್ತು ಅನ್ನಪೂರ್ಣೇಶ್ವರಿನಗರದ ಮುದ್ದಿನಪಾಳ್ಯದಲ್ಲಿ 5 ವಾಹನಗಳಿಗೆ ಹಾನಿ ಮಾಡಿದ್ದಾರೆ.
ಆರೋಪಿಗಳು ಮುಖಗಳನ್ನು ಟವೆಲ್‌ನಿಂದ ಮುಚ್ಚಿಕೊಂಡಿದ್ದು, ಮಚ್ಚು-ಲಾಂಗ್ ಹಿಡಿದುಕೊಂಡಿದ್ದರಿಂದ ಯಾರೂ ಅವರ ಹತ್ತಿರ ಹೋಗಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ್ದಾರೆ. ಆದರೆ, ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇಡೀ ಘಟನೆಯನ್ನು ಕೆಲವು ವಾಹನ ಮಾಲೀಕರ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಬ್ಯಾಡರಹಳ್ಳಿ ಮತ್ತು ಅನ್ನಪೂರ್ಣೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಆವಲಹಳ್ಳಿ-ದೊಡ್ಡಬಳ್ಳಾಪುರ ರಸ್ತೆಯಲ್ಲಿ 25 ವಾಹನಗಳಿಗೆ ಹಾನಿ ಮಾಡಿರುವ ದುಷ್ಕರ್ಮಿಗಳು, ಮೂವರ ಮೇಲೆ ದಾಳಿ ಮಾಡಿ ದರೋಡೆ ಮಾಡಿದೆ ಎಂದು ಹೇಳಲಾಗುತ್ತಿದೆ.
ದಾಸನಪುರ ಬಳಿ ಮಾರುಕಟ್ಟೆಗೆ ತರಕಾರಿ ಇಳಿಸಲು ಬಂದಿದ್ದ ಕೋಲಾರದ 33 ವರ್ಷದ ಮುನಿರಾಜು ಎಂಬ ವ್ಯಕ್ತಿಯನ್ನು ಆರೋಪಿಗಳು ದರೋಡೆ ಮಾಡಿದ್ದಾರೆ. ವಾಹನದಲ್ಲಿ ಕೆಲ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಮುನಿರಾಜು ಅವರು ರಸ್ತೆ ಬದಿ ವಾಹನ ನಿಲ್ಲಿಸಿ, ತಪಾಸಣೆ ನಡೆಸುತ್ತಿದ್ದರು. ಇದನ್ನು ನೋಡಿದ ಆರೋಪಿಗಳು ಮುನಿರಾಜು ಅವರಿಗೆ ಬೆದರಿಸಿ ಸುಲಿಗೆ ಮಾಡಿದ್ದಾರೆ. ಮುನಿರಾಜು ಅವರಿಂದ ಸುಮಾರು 75,000 ರೂ. ಮೌಲ್ಯದ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆಂದು ತಿಳಿದುಬಂದಿದೆ.
ಇದೇ ವೇಳೆ ಸಮೀಪದಲ್ಲಿ ಬಂದ ಮತ್ತೊಂದು ವಾಹನದ ಮೇಲೂ ದಾಳಿ ಮಾಡಿರುವ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆಂದು ವರಿದಿಗಳು ತಿಳಿಸಿವೆ.
ಬೆಂಗಳೂರು ಗ್ರಾಮಾಂತರದ ಚಿಕ್ಕ ಮಧುರೆ ರಸ್ತೆಯಲ್ಲಿ ಮತ್ತೊಬ್ಬ ವಾಹನ ಚಾಲಕನ ಮೇಲೆಯೂ ದರೋಡೆ ನಡೆದಿದ್ದು, ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಪರಿಣಾಮ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.