ಬೆಂಗಳೂರು: ಬೆಂಗಳೂರು ಗುಂಡಿ ಸಮಸ್ಯೆಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಾಪ ಅವರ ಸರ್ಕಾರ ಇದ್ದಾಗ ರಸ್ತೆ ಗುಂಡಿಗಳನ್ನ ಮುಚ್ಚಲಿಲ್ಲ. ಈಗ ಗುಂಡಿ ಮುಚ್ಚುತ್ತಿದ್ದಾರೆಂದು ಎಂದು ತಿರುಗೇಟು ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಬಿಜೆಪಿ ಸರ್ಕಾರದ ದುರಾಡಳಿತವು ರಸ್ತೆಗಳ ದುಃಸ್ಥಿತಿಗೆ ಕಾರಣವಾಗಿದೆ. ನಾವು ಈಗ ಗುಂಡಿಗಳನ್ನು ತುಂಬುತ್ತಿದ್ದೇವೆ. ರಾಜ್ಯದಿಂದ ಹೆಚ್ಚಿನ ತೆರಿಗೆ ಕೇಂದ್ರಕ್ಕೆ ಹೋಗುತ್ತಿದೆ. ಆದರೂ ಕೇಂದ್ರ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ಕೊಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಗುಂಡಿಗಳನ್ನು ಮುಚ್ಚಲು ಸಿಎಂ 750 ಕೋಟಿ ರೂ.ಗಳನ್ನು ನೀಡಿದ್ದಾರೆ. ಆದರೆ, ಆತುರ ಆತುರದಲ್ಲಿ ಗುಂಡಿಗಳನ್ನು ಮುಚ್ಚಲು ಸಾಧ್ಯವಿಲ್ಲ. ನಗರದ ಬಿಜೆಪಿ ಶಾಸಕರು ಮತ್ತು ಸಂಸದರು ತಮ್ಮ ಕ್ಷೇತ್ರಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದರು.
'ರಸ್ತೆ ಗುಂಡಿ ಗಮನ' ಅಪ್ಲಿಕೇಶನ್‌ಗೆ ವಿವರಗಳನ್ನು ಸಲ್ಲಿಸುವಂತೆ ಜನರಿಗೆ ಮನವಿ ಮಾಡಲಾಗಿದೆ. ಕಾಮಗಾರಿ ವೇಳೆ ಅಧಿಕಾರಿಗಳು ಕೆಲವು ಗುಂಡಿಗಳನ್ನು ನಿರ್ಲಕ್ಷಿಸಬಹುದು. ಆದರೆ, ಜನರು ಜಾಗರೂಕರಾಗಿರಬೇಕು. ಅವರು ನೋಡುವ ಗುಂಡಿಗಳ ಕುರಿತು ಮಾಹಿತಿಯನ್ನು ಒದಗಿಸಬೇಕು. ಸಾವಿರಾರು ಜನರು ಗುಂಡಿಗಳ ಕುರಿತು ವಿವರಗಳನ್ನು ಫೋಟೋಗಳೊಂದಿಗೆ ಕಳುಹಿಸಿದ್ದಾರೆ. ಗುಂಡಿಗಳ ಪಟ್ಟಿಯನ್ನು ಒದಗಿಸುವಂತೆ ನಗರ ಸಂಚಾರ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಗುಂಡಿಗಳನ್ನು ಮುಚ್ಚಲು ಸರ್ಕಾರ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದು, ಜನರ ಬೆಂಬಲವನ್ನೂ ಕೋರಲಾಗಿದೆ ಎಂದು ತಿಳಿಸಿದರು.