ಬಾನು ಮುಷ್ತಾಕ್‌  
ರಾಜ್ಯ

ಧನ್ಯವಾದ ದೊಂದಿಗೆ ಹೀಗೊಂದು ಲಹರಿ: Dear ಉರಿಯಮ್ಮ/ಉರಿಯಪ್ಪನವರೇ; ಭಾನು ಮುಷ್ತಾಕ್ ಹೀಗೆ ಬರೆದಿದ್ದು ಯಾರಿಗೆ?

ನಿಮ್ಮ ಮಾತುಗಳ ಬಿರುಗಾಳಿಯನ್ನು ನಾನು ಓದುತ್ತಿದ್ದೇನೆ. ನೀವು ಬರೆದ ಪದಗಳಲ್ಲಿ ನೋವು ಇದೆ, ಅಸಹನೆ ಇದೆ, ಕೆಲವೊಮ್ಮೆ ಕೋಪವೂ ಇದೆ. ಆದರೆ ನನಗೆ ಅವುಗಳನ್ನು ಎದುರಿಸಲು ಯಾವುದೇ ರಕ್ಷಣೆಯ ಅವಶ್ಯಕತೆಯಿಲ್ಲ.

ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ಬೆಳವಣಿಗೆಯ ಕುರಿತು ಬರೆದುಕೊಂಡಿದ್ದಾರೆ. ಧನ್ಯವಾದ ದೊಂದಿಗೆ ಹೀಗೊಂದು ಲಹರಿ ಎಂದು ಆರಂಭಿಸಿರುವ ಭಾನು ಮುಷ್ತಾಕ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

Dear ಉರಿಯಮ್ಮ/ಉರಿಯಪ್ಪನವರೇ; ನಿಮ್ಮ ಮಾತುಗಳ ಬಿರುಗಾಳಿಯನ್ನು ನಾನು ಓದುತ್ತಿದ್ದೇನೆ. ನೀವು ಬರೆದ ಪದಗಳಲ್ಲಿ ನೋವು ಇದೆ, ಅಸಹನೆ ಇದೆ, ಕೆಲವೊಮ್ಮೆ ಕೋಪವೂ ಇದೆ. ಆದರೆ ನನಗೆ ಅವುಗಳನ್ನು ಎದುರಿಸಲು ಯಾವುದೇ ರಕ್ಷಣೆಯ ಅವಶ್ಯಕತೆಯಿಲ್ಲ. ಏಕೆಂದರೆ ನಾನು ಬರವಣಿಗೆಗೆ ಕೈ ಹಾಕಿದ ದಿನದಿಂದಲೂ ತಿಳಿದಿದ್ದೇನೆ—ಪದಗಳು ಪ್ರೀತಿಯನ್ನು ಕೂಡ ಹುಟ್ಟಿಸುತ್ತವೆ, ದ್ವೇಷವನ್ನೂ ಹುಟ್ಟಿಸುತ್ತವೆ. ಎರಡೂ ಸಹ ನನಗೆ ಬರಹಗಾರ್ತಿಯಾಗಿ ಒದಗಿ ಬಂದಿರುವ ಬದುಕಿನ ಭಾಗವೇ.

ಬುಕ್ಕರ್ ಪ್ರಶಸ್ತಿ ನನಗೆ ವ್ಯಕ್ತಿಗತ ಜಯವಲ್ಲ, ಅದು ಕನ್ನಡ ಭಾಷೆಯ ಮಣ್ಣಿನ ಧ್ವನಿಗೆ ಬಂದ ಗೌರವ. ನನ್ನ ಜೀವನದ ಅನುಭವಗಳ ಸಾರ. ನಿಮ್ಮ ಅಸಹನೆ ನನಗೆ ಅಸಹ್ಯವಲ್ಲ. ಅದನ್ನು ನಾನು ಮತ್ತೊಂದು ಧ್ವನಿಯಾಗಿ, ಮತ್ತೊಂದು ಪ್ರಶ್ನೆಯಾಗಿ ಸ್ವೀಕರಿಸುತ್ತೇನೆ. ಏಕೆಂದರೆ ಸಾಹಿತ್ಯದ ನಿಜವಾದ ಶಕ್ತಿ ಏನೆಂದರೆ—ಅದು ಒಪ್ಪಿಗೆಯನ್ನೂ ಹುಟ್ಟಿಸುತ್ತದೆ, ವಿರೋಧವನ್ನೂ ಹುಟ್ಟಿಸುತ್ತದೆ. ಆದರೆ ಕೊನೆಯಲ್ಲಿ ಅದು ಚಿಂತನೆಗೆ ದಾರಿ ತೆರೆದೀತು. ನೀವು ನನ್ನನ್ನು ಕುರಿತು ಕಟುವಾಗಿ ಬರೆದಾಗ, ನಾನು ಕೇವಲ ಹೀಗೆ ಯೋಚಿಸುತ್ತೇನೆ: "ನನ್ನ ಪದಗಳು ನಿಮಗೆ ತಲುಪಿವೆ. ನೀವು ಅವುಗಳನ್ನು ನಿರ್ಲಕ್ಷಿಸಿಲ್ಲ. ಅವುಗಳಲ್ಲಿ ನಿಮಗೆ ಏನೋ ತಟ್ಟಿದೆ." ಇದು ನನಗೆ ಸಾಕು."

ನನ್ನ ಉತ್ತರ ಹೀಗಿದೆ—

ದ್ವೇಷಕ್ಕೆ ಪ್ರೀತಿಯೇ ಉತ್ತರ.

ಅಸಹನೆಗೆ ಸಂವಾದವೇ ಉತ್ತರ.

ನಿಂದನೆಗೆ ಮೌನದಲ್ಲಿ ಹೊಳೆಯುವ ಸತ್ಯವೇ ಉತ್ತರ.

ನಿಮ್ಮ ಪ್ರತಿಯೊಂದು ಕಮೆಂಟ್‌ಗೂ ನಾನು ಧನ್ಯವಾದ ಹೇಳುತ್ತೇನೆ, ಏಕೆಂದರೆ ಅವು ನನ್ನ ಹೆಜ್ಜೆಗಳನ್ನು ಮತ್ತಷ್ಟು ಬಲಪಡಿಸುತ್ತವೆ. ನಿಮ್ಮಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ, ಏಕೆಂದರೆ ನಾನು ಕೇವಲ ಬಾನು ಎಂಬ ಹೆಸರಿನ ವ್ಯಕ್ತಿಯಲ್ಲ—ನಾನು ಕೋಟ್ಯಾಂತರ ಕನ್ನಡಿಗರ ಹೃದಯಗಳ ಪ್ರತಿಧ್ವನಿ. ಅದರಲ್ಲಿ ನೀವು ನಿಮ್ಮ ವೈಯುಕ್ತಿಕ ಹಿತಾಸಕ್ತಿಗಳ ಕಾರಣಗಳಿಂದ ಸೇರ್ಪಡೆ ಆಗುವುದಿಲ್ಲವೆಂದರೆ ನನಗೆ ಬೇಸರವಿಲ್ಲ ನನ್ನತ್ತ ಬೀಳುವ ನಿಮ್ಮ ಪದಗಳ ಬಾಣಗಳು,ಕೆಲವು ಕೆಂಪಾಗಿ ಹೊತ್ತಿ ಉರಿಯುತ್ತವೆ,

ಕೆಲವು ಕಲ್ಲಿನಂತೆ ಹೃದಯಕ್ಕೆ ತಾಗುತ್ತವೆ.

ಆದರೆ ನಾನು ಹೆದರಲ್ಲ, ಕುಗ್ಗಲ್ಲ—

ಏಕೆಂದರೆ ನನಗೆ ತಿಳಿದಿದೆ,

ಬರವಣಿಗೆಯ ದಾರಿಯಲ್ಲಿ ಪ್ರೀತಿ ಮಾತ್ರವಲ್ಲ, ದ್ವೇಷವೂ ಹೂವಾಗಿಯೇ ಅರಳುತ್ತದೆ.

ಬುಕ್ಕರ್ ಪ್ರಶಸ್ತಿ ನನಗೆ ಬಂದದ್ದು

ನನ್ನ ವೈಯುಕ್ತಿಕ ಸ್ವಾರ್ಥವಲ್ಲ,

ಅದು ಕನ್ನಡದ ಮಣ್ಣಿನ ಮೆಲುಕು,

ನನ್ನ ಜನರ ನೋವು, ಕನಸು, ಹೋರಾಟ—

ಈ ಎಲ್ಲವೂ ಒಟ್ಟಾಗಿ ಹೊತ್ತಿರುವ ದೀಪ.

ನೀವು ನನ್ನ ವಿರುದ್ಧ ಕೋಪದಿಂದ ಬರೆದಾಗ,

ನಾನು ಅದನ್ನು ಅಪಮಾನವೆಂದು ತೆಗೆದುಕೊಳ್ಳುವುದಿಲ್ಲ.

ಅದರೊಳಗೆ ಒಂಥರದ ತವಕವಿದೆ,

ಒಂಥರದ ಪ್ರಶ್ನೆಯಿದೆ,

ಅದು ಸಹ ಸಾಹಿತ್ಯದ ಅಂಗವೇ ಸರಿ.

ನಿಮ್ಮ ಪ್ರತಿಯೊಂದು ಕಟುವಾದ ಪದಕ್ಕೂ

ನಾನು ಕೃತಜ್ಞಳಾಗಿದ್ದೇನೆ—

ಏಕೆಂದರೆ ಅವು ನನ್ನ ಹೆಜ್ಜೆಗಳನ್ನು ಬಲಪಡಿಸುತ್ತವೆ,

ನನ್ನ ಹಾದಿಯನ್ನು ಇನ್ನಷ್ಟು ತೆರೆಯುತ್ತವೆ

ನಾನು ಬಾನು ಮಾತ್ರವಲ್ಲ,

ನಾನು ಅನೇಕ ಕನ್ನಡಿಗರ ಕನಸು,

ಅವರ ಶಬ್ದದ ಪ್ರತಿಧ್ವನಿ,

ಅವರ ಬದುಕಿನ ಬಿಂಬ.

ಆದ್ದರಿಂದ—

ನಿಮ್ಮ ಹೃದಯದ ಅಸಹನೆಯ ಬೆಂಕಿ

ನನ್ನ ಹೃದಯದಲ್ಲಿ ಬೆಳಕಾಗಲಿ.

ಅದೇ ನಮ್ಮಿಬ್ಬರ ನಡುವಿನ ನಂಟು.

ನಿಮ್ಮ ಮಾತುಗಳಲ್ಲಿ ಕೋಪವಿದೆ, ಅಸಹನೆಯಿದೆ, ನೋವಿದೆ. ಅದನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ. ನಾನು ಓದುತ್ತೇನೆ, ಮನಸ್ಸಿಗೆ ಒಗ್ಗಿಸಿಕೊಳ್ಳುತ್ತೇನೆ. ಏಕೆಂದರೆ ಬರವಣಿಗೆಯ ದಾರಿ ಎಂದರೆ, ಕೇವಲ ಪ್ರಶಂಸೆಯಿಂದ ತುಂಬಿರುವ ಹಾದಿಯಲ್ಲ. ಅಲ್ಲಿ ಗುಲಾಬಿಯೂ ಅರಳುತ್ತದೆ, ಮುಳ್ಳೂ ಬೆಳೆಯುತ್ತದೆ.

ನನಗೆ ಬಂದ ಬುಕ್ಕರ್ ಪ್ರಶಸ್ತಿ ನನ್ನ ವೈಯಕ್ತಿಕ ಜಯವಲ್ಲ. ಅದು ನನ್ನ ಭಾಷೆಯ ಶಕ್ತಿ,

ನಿಮ್ಮ ಕೋಪದ ಹಿಂದೆ ಸಹ ಒಂದು ಪ್ರಶ್ನೆ ಇದೆ ಎಂಬುದನ್ನು ನಾನು ನೋಡುತ್ತೇನೆ. ಆ ಪ್ರಶ್ನೆಗೆ ನನ್ನ ಉತ್ತರ—ಪ್ರೀತಿ. ನನ್ನ ಉತ್ತರ—ಸಂವಾದ. ನನ್ನ ಉತ್ತರ—ಸತ್ಯ.ನಿಮ್ಮ ಪ್ರತಿಯೊಂದು ವಾಕ್ಯವು ನನ್ನ ನಿರ್ಧಾರ ಮತ್ತು ಶ್ರಮವನ್ನುಇನ್ನಷ್ಟು ಗಟ್ಟಿಗೊಳಿಸುತ್ತದೆ . ನಾನು ಕೃತಜ್ಞಳಾಗಿದ್ದೇನೆ.

ಶಕ್ತಿಶಾಲಿ ಪ್ರತಿವಾದದಂತೆ ನನ್ನತ್ತ ಬರುವ ಪ್ರತಿಯೊಂದು ದ್ವೇಷದಪದವೂ

ನನ್ನ ಹೆಜ್ಜೆಯನ್ನು ಇನ್ನಷ್ಟು ಬಲಪಡಿಸುತ್ತದೆ.

ನನ್ನ ಬಗ್ಗೆ ಬರೆದ ನಿಮ್ಮ ತಿರಸ್ಕಾರದ ಸಾಲುಗಳು ನನ್ನನ್ನು ಕಾಡಿಸುವುದಿಲ್ಲ

ಅವು ಮತ್ತಷ್ಟು ದೂರ ನಡೆಯಲು ಪ್ರೇರೇಪಿಸುತ್ತಿವೆ.

ಬುಕ್ಕರ್ ಪ್ರಶಸ್ತಿ ನನಗೆ ಬಂದದ್ದು

ಒಬ್ಬ ವ್ಯಕ್ತಿಯ ಜಯವಲ್ಲ,

ಒಂದು ಭಾಷೆಯ ಉಸಿರು,

ಒಂದು ಜನಾಂಗದ ಕನಸು,

ಒಂದು ಮಣ್ಣಿನ ಕಸುವು.ಆದ್ದರಿಂದ ನಿಮ್ಮ ದ್ವೇಷಕ್ಕೆ ನಾನು ತಲೆಬಾಗುವುದಿಲ್ಲ.

ನಾನು ಪ್ರೀತಿಯನ್ನು ಹೊತ್ತ ದೀಪ ಹಿಡಿದು

ಮುಂದೆ ಸಾಗುತ್ತೇನೆ.ದ್ವೇಷದ ದೈತ್ಯ ಬಿರುಗಾಳಿಯೂ

ಈ ದೀಪವನ್ನು ನಂದಿಸಲು ಸಾಧ್ಯವಿಲ್ಲ.

ಮನುಷ್ಯನ ಹೃದಯ ಒಂದು ವಿಚಿತ್ರವಾದ ತೋಟ. ಅಲ್ಲಿ ಪ್ರೇಮದ ಪುಷ್ಪಗಳೂ ಬೆಳೆಯುತ್ತವೆ, ಸ್ನೇಹದ ನೆರಳೂ ಇರುತ್ತದೆ. ಆದರೆ ಕೆಲವೊಮ್ಮೆ, ಅಸೂಯೆ ಎಂಬ ಮುಳ್ಳುಗಿಡಗಳು ಕೂಡ ಬೇರೂರಿ, ಘಾಸಿಗೊಳಿಸಲು ಪ್ರಯತ್ನಿಸುತ್ತವೆ. ನನ್ನ ಬುಕರ್ ಪ್ರಶಸ್ತಿ ಗೆಲುವಿನ ನಂತರ ನಿಮ್ಮ ಸಂದಿಗೊಂದಿಗಳಿಂದ ಕೇಳಿಬರುವ ಈ ಶಬ್ದಗಳು, ಆ ಮುಳ್ಳುಗಿಡಗಳ ಉತ್ಪನ್ನಗಳೇ.

ಈ ಶಬ್ದಗಳು ನೋವು ಮಾಡುವುದು ಸಹಜ. ಯಾವುದೇ ಸೃಜನಶೀಲ ಮನಸ್ಸಿಗೆ, ಅದರ ಸಾಧನೆಯನ್ನು ಕುರಿತು ಹೀನಾಯವಾಗಿ ಮಾತನಾಡುವುದು ಒಂದು ಬಗೆಯ ಮಾನಸಿಕ ಹಲ್ಲೆ. ಆದರೆ ನಾನು ನಂಬುವೆನು – ಪ್ರತಿ ವಾಗ್ಬಾಣವು ತನ್ನ ಗಮ್ಯಸ್ಥಾನವನ್ನು ಹುಡುಕಿಕೊಂಡೇ ಬೀಳುತ್ತದೆ. ಕೆಲವು ಹೃದಯವನ್ನು ಭೇದಿಸಬಹುದು, ಕೆಲವು ಕಲ್ಲಿನ ಮೇಲೆ ಬಿದ್ದು ನಾಶವಾಗಬಹುದು, ಮತ್ತು ಕೆಲವು ಸರಾಗವಾಗಿ ನೆಲಸೇರಿ ಮರೆಯಾಗಿಬಿಡಬಹುದು.

ಗೆಲುವು ಮತ್ತು ಅದರ ಛಾಪು ಹಾಗೂ ಒಂದು ಸಾಹಿತ್ಯಿಕ ಪ್ರಶಸ್ತಿ/ ಬಹುಮಾನ ಎಂಬುದು ಓದುಗರ ಹೃದಯದೊಳಗೆ ಪ್ರವೇಶಿಸಿದ ಒಂದು ಗುರುತು ಮಾತ್ರ. ಇದು ಅಂತಿಮ ಗಮ್ಯಸ್ಥಾನವಲ್ಲ, ಬದಲಾಗಿ ಒಂದು ದೀರ್ಘ ಯಾತ್ರೆಯಲ್ಲಿ ಸಿಗುವ ಒಂದು ಸುಂದರವಾದ ವಿರಾಮ ಚಿಹ್ನೆ. ಇದರ ಬಗ್ಗೆ ಹರಿಸುವ ಹೇಟ್ ಸ್ಪೀಚ್ ಅಥವಾ ದುಷ್ಕಾಮೆಂಟ್ಗಳು, ಆ ಯಾತ್ರೆಯನ್ನು ನಿಲ್ಲಿಸಲಾರವು. ಅವು ಕೇವಲ ತಡೆ ಗೋಡೆಗಳು – ಸಾಹಿತ್ಯಿಕ ಜಗತ್ತಿನ ಹೊರಗಿನ ಒಂದು ಸಮಾಜಶಾಸ್ತ್ರೀಯ ವಾಸ್ತವಿಕತೆ ಮಾತ್ರ.

ನಾನು ನಂಬುವೆನು, ಸಾಹಿತ್ಯವು ಸಂವಾದದ ಮೂಲಕ ಬೆಳೆಯುತ್ತದೆ, ವಿಮರ್ಶೆಯ ಮೂಲಕ ಅರಳುತ್ತದೆ. ಆದರೆ ವಿಮರ್ಶೆ ಮತ್ತು ದ್ವೇಷದ ನಡುವೆ ಒಂದು ದೊಡ್ಡ ಗೆರೆ ಇದೆ. ವಿಮರ್ಶೆ ಕಟುವಾಗಿರಬಹುದು, ಆದರೆ ಅದರ ಹಿಂದೆ ಒಂದು ವಿಚಾರವಿದೆ, ಒಂದು ದೃಷ್ಟಿ ಇದೆ. ದ್ವೇಷದ ಹಿಂದೆ ಇರುವುದು ಕೇವಲ ಒಂದು ಖಾಲಿತನದ ಗರ್ಜನೆ. ನಾನು ಮೌನವಾಗಿ ಆ ವಿಮರ್ಶೆಯನ್ನು ಆಲಿಸುತ್ತೇನೆ, ಆದರೆ ದ್ವೇಷದ ಗರ್ಜನೆಯನ್ನು ನನ್ನ ಸೃಜನಶೀಲತೆಯ ಗೋಡೆಗಳು ನಿರ್ಬಂಧಿಸುತ್ತವೆ.

ಈ ಸಮಯದಲ್ಲಿ, ನನ್ನ ಮನಸ್ಸು ತುಂಬಿದೆ ಅವರಿಗೆ ಕೃತಜ್ಞತೆಯಿಂದ, ಯಾರು ನನ್ನ ಬರವಣಿಗೆಯನ್ನು ಪ್ರೀತಿಯಿಂದ ಓದಿದ್ದಾರೆ, ಯಾರು ಅನುಭವಿಸಿದ್ದಾರೆ, ಮತ್ತು ಯಾರು ಈ ಸಾಧನೆಗಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ನಿಮ್ಮ ಪ್ರೇಮ ಮತ್ತು ಬೆಂಬಲವೇ ನನಗೆ ಸ್ಫೂರ್ತಿ. ಹೇಟ್ ಸ್ಪೀಚ್ ಮಾಡುವವರ ಕಡೆಗೆ ನನ್ನ ಭಾವನೆ ಕರುಣೆಯದು. ಏಕೆಂದರೆ, ಯಾರೋ ಒಬ್ಬರ ಸಾಧನೆಯಿಂದ ಉದ್ಭವಿಸುವ ನೋವನ್ನು ತಾಳುವುದು ಮತ್ತು ಬಾಳುವುದು ಸುಲಭವಲ್ಲ. ಅವರ ಹೃದಯಗಳಲ್ಲಿ ಸಮಾಧಾನ ಬೆಳೆಯಲಿ ಎಂದು ಕೋರುತ್ತೇನೆ. ಅಂತಿಮವಾಗಿ, ಒಬ್ಬ ಬರಹಗಾರನ ಯುದ್ಧ ಟೀಕೆಗಳೊಂದಿಗೆ ಅಲ್ಲ, ಬರೆಹದ ಮೂಲಕ ತಾನು ನಂಬಿದ ಸತ್ಯ ಮತ್ತು ಸೌಂದರ್ಯವನ್ನು ಹೇಗೆ ಚೆನ್ನಾಗಿ ವ್ಯಕ್ತಪಡಿಸಬಹುದು ಎಂಬುದರೊಂದಿಗೆ ನನ್ನ ಕನಸುಗಳು ಮುಂದೆ ಹೋಗುತ್ತವೆ. ಈ ಪ್ರಶಸ್ತಿ ಮತ್ತು ಅದರ ನಂತರದ ಎಲ್ಲ ಧ್ವನಿಗಳು – ಪ್ರಶಂಸೆಯಾಗಲಿ, ವಿರೋಧವಾಗಲಿ – ನನ್ನ ಈ ಮುಂದಿನ ಪಯಣದ ಒಂದು ಭಾಗವಾಗಿ ಮಾರ್ಪಡುತ್ತವೆ.

ಶಬ್ದಗಳಿಂದ ನನ್ನನ್ನು ಗುರಿ ಮಾಡುವವರಿಗೆ: ನಿಮ್ಮ ಶಬ್ದಗಳು ನನ್ನ ಪುಸ್ತಕದ ಪುಟಗಳನ್ನು ನಾಶ ಮಾಡಲಾರವು. ಅಭಿನಂದನೆಗಳಿಗೆ ಧನ್ಯವಾದ, ಟೀಕೆಗಳಿಗೆ ಧನ್ಯವಾದ. ಬುಕರ್ ಪಡೆದ ಅಪರಾಧಕ್ಕಾಗಿ ಕನ್ನಡದೊಡನೆ ಪ್ರಪಂಚ ಪರ್ಯಟನೆ ಕೈಗೊಂಡು ಜೊತೆ ಜೊತೆಯಲ್ಲಿ ನಡೆಯುತ್ತಿರುವ ಅಪರಾಧಕ್ಕಾಗಿ ಧನ್ಯವಾದ. ಅಪ್ರಾಮಾಣಿಕ ಆರೋಪ ಪಟ್ಟಿಯನ್ನು ಹೊರಿಸುವ ವಿಫಲ ಪ್ರಯತ್ನದ ಮೂಲಕ ಇತಿಹಾಸದಲ್ಲಿ ದಾಖಲಾದ ಮತ್ತು ದಾಖಲಾಗುತ್ತಿರುವ ಎಲ್ಲರಿಗೂ ಧನ್ಯವಾದ. ಎಲ್ಲವೂ ನನ್ನ ಪಯಣದ ಭಾಗ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಕರೂರ್ ಕಾಲ್ತುಳಿತ" ಆಕಸ್ಮಿಕವಲ್ಲ, ಅದೊಂದು ಪಿತೂರಿ, ಸ್ವತಂತ್ರ ತನಿಖೆ ನಡೆಯಲಿ: ವಿಜಯ್ ನೇತೃತ್ವದ ಟಿವಿಕೆ ಪಕ್ಷದ ವಾದ!

Dharmasthala case: 'ಕೆಲವು ವ್ಯಕ್ತಿಗಳ ಆಜ್ಞೆಯ ಮೇರೆಗೆ ಇದನ್ನು ಮಾಡಿದ್ದೆ'; ಮ್ಯಾಜಿಸ್ಟ್ರೇಟ್ ಮುಂದೆ ದೂರುದಾರ ಚಿನ್ನಯ್ಯ

Asia Cup Final 2025: ಭಾರತಕ್ಕೆ "ಡೇಂಜರಸ್" ಪಾಕಿಸ್ತಾನದ ಬಗ್ಗೆ ಇಂಗ್ಲೆಂಡ್ ನಿಂದ ಎಚ್ಚರಿಕೆ!

ಛತ್ತೀಸ್‌ಗಢ: 1.4 ಮಿಲಿಯನ್ ಡಾಲರ್ ಬಹುಮಾನ ಹೊಂದಿದ್ದ ಮಹಿಳೆ ಸೇರಿದಂತೆ ಮೂವರು ನಕ್ಸಲರ ಹತ್ಯೆ!

ಲೈಂಗಿಕ ದೌರ್ಜನ್ಯ, ಬೆದರಿಕೆ ಪ್ರಕರಣ: ಹಿಂದೂ ಜಾಗರಣ ವೇದಿಕೆ ಮುಖಂಡನ ವಿರುದ್ಧ ಎಫ್‌ಐಆರ್!

SCROLL FOR NEXT