ಬೆಂಗಳೂರು: ದಂಪತಿ ಮತ್ತು ಅವರ ಕಾರು ಚಾಲಕನನ್ನು ಅಪಹರಿಸಿ 1.1 ಕೋಟಿ ರೂಪಾಯಿ ನಗದು ದೋಚಿದ್ದ ಎಂಟು ಮಂದಿಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಶನಿವಾರ ಸಂಜೆ ಅಕ್ಷಯ ಪಾರ್ಕ್ ಬಳಿ ಈ ಘಟನೆ ನಡೆದಿದೆ. ವಶಪಡಿಸಿಕೊಳ್ಳಲಾದ ನಗದು ಹಣ ಹವಾಲಾ ವ್ಯವಹಾರಕ್ಕೆ ಸಂಬಂಧಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಆರೋಪಿಗಳನ್ನು ನರಸಿಂಹ (34ವ), ಕಾರು ಚಾಲಕ ಜೀವನ್ (27ವ), ಜಿಮ್ ತರಬೇತುದಾರ ವೆಂಕಟ್ ರಾಜ್ (28ವ), ಕಿಶೋರ್ (30), ಆಟೋರಿಕ್ಷಾ ಚಾಲಕ ಚಂದ್ರ (32), ಭದ್ರತಾ ಸಿಬ್ಬಂದಿ ರವಿ ಕಿರಣ್ (33), ಮತ್ತು ಕುಮಾರ್ ಎನ್ (36) ಮತ್ತು ನಮನ್ (18) ಎಂದು ಗುರುತಿಸಲಾಗಿದ್ದು, ಎಲ್ಲರೂ ಆಗ್ನೇಯ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ದೂರುದಾರ ಹೇಮಂತ್ (32ವ), ಕಾರು ಚಾಲಕ, ತುಮಕೂರಿನ ಅಡಿಕೆ ವ್ಯಾಪಾರಿ ಮೋಹನ್, ರಾಜಸ್ಥಾನ ಮೂಲದ ಅಕ್ಷಯ ಲೇಔಟ್ ನಿವಾಸಿಗಳಾದ ರಿಯಲ್ ಎಸ್ಟೇಟ್ ಬ್ರೋಕರ್ ಮೋಟಾ ರಾಮ್ ಅಲಿಯಾಸ್ ರಮೇಶ್ ಮತ್ತು ಅವರ ಪತ್ನಿ ಲಕ್ಷ್ಮಿದೇವಿ ಅವರಿಂದ ಹಣ ಸಂಗ್ರಹಿಸಲು ಕೇಳಿದ್ದರು ಎಂದು ಹೇಳಿದ್ದಾರೆ. ದಂಪತಿ ಎರಡು ಚೀಲಗಳಲ್ಲಿ 1.1 ಕೋಟಿ ರೂಪಾಯಿ ನಗದು ಇತ್ತು. ಪೊಲೀಸರ ಪ್ರಕಾರ, ಹೇಮಂತ್ ಮತ್ತು ದಂಪತಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಅಕ್ಷಯ ಪಾರ್ಕ್‌ನಲ್ಲಿದ್ದರು.
ಘಟನೆ ಹೇಗಾಯಿತು?
ಆರೋಪಿಗಳ ವರ್ತನೆಯಲ್ಲಿ ಅನುಮಾನ ಬಂದು ನರಸಿಂಹ ಮತ್ತು ಜೀವನ್ ಕಾರಿನ ಬಳಿ ಬಂದು ಬಾಗಿಲು ತೆರೆಯಲು ಪ್ರಯತ್ನಿಸಿದರು. ಪೊಲೀಸರು ಎಂದು ಹೇಳಿಕೊಂಡು ಕಾರಿನಲ್ಲಿದ್ದವರ ವೀಡಿಯೊ ಚಿತ್ರೀಕರಿಸಿದರು. ದಂಪತಿ ಅವರನ್ನು ಪ್ರಶ್ನಿಸಿದಾಗ, ಇಬ್ಬರೂ ಅವರ ಮೇಲೆ ಹಲ್ಲೆ ನಡೆಸಿ ಅವರ ಬ್ಯಾಗ್‌ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು.
ದಂಪತಿ ತಮ್ಮ ಕಾರಿನಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಆರೋಪಿಗಳು ಅವರನ್ನು ಬೈಕ್‌ಗಳಲ್ಲಿ ಬೆನ್ನಟ್ಟಿ ನಿರ್ಜನ ಪ್ರದೇಶ ಬಳಿ ಕಾರಿಗೆ ಡಿಕ್ಕಿ ಹೊಡೆದರು. ಇತರ ನಾಲ್ವರು ಆರೋಪಿಗಳು ಸೇರಿಕೊಂಡರು. ದಂಪತಿ ಮತ್ತು ಕಾರು ಚಾಲಕನನ್ನು ಒಂದು ಶೆಡ್‌ಗೆ ಕರೆದೊಯ್ಯಲಾಯಿತು.
ಅಲ್ಲಿ ಆರೋಪಿಗಳು ಬ್ಯಾಗ್‌ಗಳಲ್ಲಿ ಅಪಾರ ಪ್ರಮಾಣದ ನಗದು ಇರುವುದನ್ನು ಗಮನಿಸಿದರು. ನಂತರ, ಅವರು ದಂಪತಿ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು, 50 ಲಕ್ಷ ರೂಪಾಯಿ ನೀಡಿದರೆ ಮಾತ್ರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೇಮಂತ್ ಅಪಹರಣಕಾರರಿಂದ ತನ್ನ ಫೋನ್ ಪಡೆದು ಹಣಕ್ಕಾಗಿ ಸ್ನೇಹಿತನಿಗೆ ಕರೆ ಮಾಡಿದನು, ಸ್ನೇಹಿತ ನಿರಾಕರಿಸಿದಾಗ, ಅವನು ತನ್ನ ಚಿಕ್ಕಪ್ಪ ಮೋಹನ್ ನ್ನು ಸಂಪರ್ಕಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮೂವರನ್ನು ಸುಮಾರು ಎರಡು ಗಂಟೆಗಳ ಕಾಲ ಹುಡುಕಿ ಪತ್ತೆಹಚ್ಚಿ 1.1 ಕೋಟಿ ರೂಪಾಯಿ ದೋಚಿದರು.
ಮೋಹನ್ ಪೊಲೀಸರಿಗೆ ಮಾಹಿತಿ ನೀಡಿದಾಗ, 15 ನಿಮಿಷಗಳಲ್ಲಿ, ಹುಳಿಮಾವು ಇನ್ಸ್‌ಪೆಕ್ಟರ್ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿ, ಆರೋಪಿಗಳನ್ನು ಬಂಧಿಸಿ, ಹಣವನ್ನು ವಶಪಡಿಸಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್ ನೆಟ್ ವರ್ಕ್ ಆಧಾರದ ಮೇಲೆ ಅವರನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.