ಕಲಬುರಗಿ: ಪ್ರವಾಹಕ್ಕೆ ಕಲಬುರಗಿ ತತ್ತರಿಸಿ ಹೋಗಿದ್ದು, ಸೇಡಂ ತಾಲೂಕಿನ ಸಮಖೇಡ ತಾಂಡಾ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಮನೆಗೆ ನೀರು ನುಗ್ಗಿದ ಪರಿಣಾಮ ಬಾಣಂತಿಯೊಬ್ಬಳು ಹಸೂಗೂಸಿನೊಂದಿಗೆ ರಾತ್ರಿಯೆಲ್ಲಾ ಮನೆ ಮೇಲ್ಚಾವಣಿ ಮೇಲೆ ಕುಳಿತು ಪರದಾಡಿದ ಘಟನೆ ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಭೀಕರ ಮಳೆಯಾಗುತ್ತಿದ್ದು, ಜನರನ್ನು ಹೈರಾಣ ಮಾಡಿದೆ. ಮಳೆಯ ಪರಿಣಾಮ ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು ಸಮಖೇಡ ತಾಂಡಾವನ್ನು ಜಲಾವೃತವನ್ನಾಗಿಸಿದೆ.
ಗ್ರಾಮದ ಶೋಭಾ ಎಂಬ ಬಾಣಂತಿ ತನ್ನ ಹಸೂಗೂಸನ್ನು ಕಟ್ಟಿ ಮನೆಯ ಮೇಲ್ಚಾವಣಿಯಲ್ಲಿಯೇ ಜೀವನ ಮಾಡುತ್ತಾ ಪರದಾಟ ನಡೆಸುತ್ತಿದ್ದಾಳೆ.
ಕಾಗಿಣಾ ನದಿಯ ಇಬ್ಬರ ತಾಂಡಾದ 100 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಮನೆ ಸಾಮಗ್ರಿಗಳೆಲ್ಲ ನದಿಯ ಪಾಲಾಗಿದ್ದವು. ಹೀಗಾಗಿ ಜೀವ ಉಳಿಸಿಕೊಳ್ಳಲು ಶೋಭಾ ಹಸೂಗೂಸನ್ನೇ ಕಂಕುಳಲ್ಲಿ ಹೊತ್ತುಕೊಂಡು ಮೇಲ್ಚಾವಣಿ ಏರಿದ್ದಾರೆ. ನಮ್ಮ ಸಂಕಷ್ಟವನ್ನು ಯಾವೊಬ್ಬ ಅಧಿಕಾರಿಗಳೂ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಗ್ರಾಮವೇ ಮುಳುಗಡೆಯಾದರೂ ಆಡಳಿತ ವರ್ಗದ ಯಾರೊಬ್ಬರು ನೆರವಿಗೆ ಬಂದಿಲ್ಲ ಎಂದು ತಾಂಡಾ ನಿವಾಸಿಗಳು ಧಿಡೀರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಳಕ್ಕೆ ಧಾವಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಗ್ರಾಮಸ್ಥರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಿದರು.
ನಂತರ ರಾಜ್ಯ ವಿಪತ್ತು ರಕ್ಷಣಾ ಪಡೆ (SDRF) ಸ್ಥಳಕ್ಕಾಮಿಸಿ ತಾಯಿ ಹಾಗೂ ಮಗುವನ್ನು ರಕ್ಷಣೆ ಮಾಡಿದರು. ತಾಯಿ ಮತ್ತು ಮಗು ಮನೆಯ ಮೇಲ್ಚಾವಣಿಯಲ್ಲಿ ಮೂರು ಗಂಟೆಗಳ ಕಾಲ ಇದ್ದಾರೆಂದು ಸೇಡಂ ತಹಶೀಲ್ದಾರ್ ಶ್ರೇಯ್ಯಾಂಕ್ ಧನಶ್ರೀ ಅವರು ಹೇಳಿದ್ದಾರೆ.
ಈ ನಡುವೆ ಚಿತ್ತಾಪುರ ತಾಲ್ಲೂಕಿನ ಕಡಬೂರು ಗ್ರಾಮದ ಕೆಲವು ಗ್ರಾಮಸ್ಥರು, ಕಾಗಿನಾ ಮತ್ತು ಭೀಮಾ ನದಿಗಳಿಂದ ತಮ್ಮ ಗ್ರಾಮ ಮುಳುಗಿದ್ದರೂ, ವಾಡಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿರುವ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿದರು.
ನವರಾತ್ರಿ ಪ್ರಾರಂಭವಾಗಿದ್ದು, ಮನೆಗಳ ದೇವರ ಮುಂದೆ ಗ್ರಾಮದ ಜನರು ದೀಪಗಳನ್ನು ಇರಿಸಿದ್ದಾರೆ. 9 ದಿನಗಳ ಕಾಲ ಆ ದೀಪ ನೋಡಿಕೊಳ್ಳಬೇಕಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಸ್ಥಳಾಂತರಕ್ಕೆ ನಿರಾಕರಿಸುತ್ತಿದ್ದಾರೆಂದು ಕಡಬೂರಿಗೆ ರಕ್ಷಣಾ ತಂಡದ ನೇತೃತ್ವ ವಹಿಸಿದ್ದ ಶಹಾಬಾದ್ ಡಿಎಸ್ಪಿ ಶಂಕರ್ ಗೌಡ ಪಾಟೀಲ್ ಅವರು ಹೇಳಿದ್ದಾರೆ.
ಈ ನಡುವೆ ಅಪಾಯವನ್ನು ಅರಿತ ಅಧಿಕಾರಿಗಳು ಬಲವಂತವಾಗಿ ಗ್ರಾಮಸ್ಥಱನ್ನು ಮೊರಾರ್ಜಿ ದೇಸಾಯಿ ಶಾಲೆಯಲ್ಲಿರುವ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದರು.
ರಕ್ಷಣಾ ತಂಡವು ಕಡಬೂರಿನಿಂದ 350 ಜನರನ್ನು ಆರೈಕೆ ಕೇಂದ್ರಕ್ಕೆ ಯಶಸ್ವಿಯಾಗಿ ಸ್ಥಳಾಂತರಿಸಿತು ಎಂದು ಶಂಕರ್ ಗೌಡ ಪಾಟೀಲ್ ಅವರು ಹೇಳಿದ್ದಾರೆ.