ರಾಮನಗರ: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ. 22ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ ಕರ್ತವ್ಯವನ್ನು ಕೇವಲ 7 ದಿನದಲ್ಲಿ ಪೂರ್ಣಗೊಳಿಸಿದ ಶಿಕ್ಷಕಿಗೆ 1,001 ರೂ. ನಗದು ಬಹುಮಾನ ನೀಡಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಅಭಿನಂದಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ (ಯುಜಿಎಚ್‌ಪಿಎಸ್) ಸಹ ಶಿಕ್ಷಕಿ ಶಾಂತಮ್ಮ ಅವರಿಗೆ ಜಿಲ್ಲಾಧಿಕಾರಿ ಅಭಿನಂದಿಸಿದ್ದಾರೆ.
ತಾಲ್ಲೂಕಿನ ಹೊಡಿಕೆ ಹೊಸಹಳ್ಳಿ, ಚನ್ನಂಕೇಗೌಡನದೊಡ್ಡಿ ಮತ್ತು ಗೋವಿಂದೇಗೌಡನದೊಡ್ಡಿ ಗ್ರಾಮಗಳಲ್ಲಿ 86 ಮನೆಗಳ ಸಮೀಕ್ಷೆಗೆ ಶಾಂತಮ್ಮ ಅವರನ್ನು ನಿಯೋಜಿಸಲಾಗಿತ್ತು.
ಸಮೀಕ್ಷೆ ಪೂರ್ಣಗೊಳ್ಳಲು 15 ದಿನಗಳು ಇದ್ದರೂ, ಶಾಂತಮ್ಮ ಅವರಿಗೆ ನಿಯೋಜಿಸಲಾದ ಎಲ್ಲಾ ಮನೆಗಳ ಮಾಹಿತಿಯನ್ನು ಕೇವಲ ಏಳು ದಿನಗಳಲ್ಲಿ ಸಂಗ್ರಹಿಸಿದ್ದಾರೆ.
ಶಿಕ್ಷಕಿಯ ಕಾರ್ಯವೈಖರಿಗೆ ಜಿಲ್ಲಾಧಿಕಾರಿ ಸಂತಸ ವ್ಯಕ್ತಪಡಿಸಿದ್ದು, ಸಮೀಕ್ಷೆಯಲ್ಲಿ ನೀವು ತೋರಿಸಿದ ಆಸಕ್ತಿ, ಉತ್ಸಾಹ ಮತ್ತು ಪ್ರಾಮಾಣಿಕ ಪ್ರಯತ್ನಗಳು ಸಮೀಕ್ಷೆ ಕಾರ್ಯದ ತ್ವರಿತ ಪ್ರಗತಿಗೆ ಸಹಾಯ ಮಾಡಿದೆ. ಸಮೀಕ್ಷೆ ಕಾರ್ಯಕ್ಕಾಗಿ ನಿಮ್ಮ ಸಹಕಾರ ಮತ್ತು ಉತ್ಸಾಹವನ್ನು ಜಿಲ್ಲಾಡಳಿತ ಶ್ಲಾಘಿಸುತ್ತದೆ. ನಿಮ್ಮ ಉತ್ತಮ ಕೆಲಸವನ್ನು ಮುಂದುವರಿಸಿ ಎಂದು ಹೇಳಿದ್ದಾರೆ.