ಬೆಂಗಳೂರು: ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಹೋರಾಟದ ನೇತೃತ್ವವಹಿಸಿಕೊಂಡಿದ್ದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬೆಂಗಳೂರಿನ ಮಹಿಳೆ ದೂರು ನೀಡಿದ್ದು, ಸ್ವತಃ ಸ್ವಾಮೀಜಿ ನನ್ನ ಖಾಸಗಿ ವಿಡಿಯೋ ಮಾಡಿ ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚಿಗೆ ಜಯಮೃತ್ಯುಂಜಯ ಸ್ವಾಮೀಜಿಯದ್ದು ಎನ್ನಲಾದ ಖಾಸಗಿ ವಿಡಿಯೋ ಹರಿದಾಡಿದ್ದು, ಈಗ ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಸ್ವಾಮೀಜಿಯಿಂದ ಪ್ರತಿದೂರು
ಇನ್ನೊಂದೆಡೆ, ಜಯಮೃತ್ಯುಂಜಯ ಸ್ವಾಮೀಜಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ವಿರುದ್ಧ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಸ್ವಾಮೀಜಿ ತಮ್ಮ ದೂರಿನಲ್ಲಿ, ಸಂತ್ರಸ್ತೆ ಮಹಿಳೆ ತಾನು ಅನಾಥಾಶ್ರಮ ನಡೆಸುತ್ತಿರುವುದಾಗಿ ಹೇಳಿ ಪರಿಚಯ ಮಾಡಿಕೊಂಡಿದ್ದಳು ಎಂದು ತಿಳಿಸಿದ್ದಾರೆ. ಅಲ್ಲದೆ ತಮ್ಮ ತೇಜೋವಧೆ ಮಾಡಲು 3 ಕೋಟಿ ರೂಪಾಯಿಗಾಗಿ ಮಹಿಳೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.