ಬೆಂಗಳೂರು: ರಾಜ್ಯದ ಮದ್ಯ ಪ್ರಿಯರಿಗೆ ಶೀಘ್ರದಲ್ಲೇ ಬೆಲೆ ಏರಿಕೆ ಬಿಸಿ ತಟ್ಟಲಿದೆ. ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದ್ದು, ಗಾತ್ರದ ಬದಲಿಗೆ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ “Alcohol-in-Beverage (AIB-ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ)” ನೀತಿಯನ್ನು ಜಾರಿಗೆ ತರಲು ಕರಡು ಅಧಿಸೂಚನೆ ಹೊರಡಿಸಿದೆ.
ಈ ಹೊಸ ನೀತಿಯ ಪ್ರಕಾರ, ಮದ್ಯದ ಬಾಟಲ್‌ನಲ್ಲಿ ಇರುವ ನಿಜವಾದ ಆಲ್ಕೋಹಾಲ್ ಅಂಶವನ್ನು ಆಧರಿಸಿ ತೆರಿಗೆ ನಿಗದಿಯಾಗಲಿದೆ. ಅಂದರೆ, ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಇದರ ಪರಿಣಾಮವಾಗಿ ಸಾಮಾನ್ಯವಾಗಿ ಬಳಕೆಯಾಗುವ ಕಡಿಮೆ ಬೆಲೆಯ ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಸೇರಿದಂತೆ ಭಾರತೀಯ ಮದ್ಯದ ದರಗಳು ಶೇ.20ರಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.
ಈಗಿರುವ ಪ್ರಮಾಣ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಿ, ನಿಜವಾದ ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ ವಿಧಿಸುವ ಹೊಸ ಮಾದರಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಈ ಬದಲಾವಣೆ ಜಾರಿಯಾದರೆ ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಇಂತಹ ತೆರಿಗೆ ವ್ಯವಸ್ಥೆ ಅನುಸರಿಸುವ ರಾಜ್ಯವಾಗಲಿದೆ.
ಈ ನೀತಿಯ ಪರಿಣಾಮವಾಗಿ ಕಡಿಮೆ ಬೆಲೆಯ ಮದ್ಯವು ಹೆಚ್ಚು ಪರಿಣಾಮಕ್ಕೊಳಗಾಗಲಿದೆ. ಈಗಾಗಲೇ MRP ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಹೊಸ ವ್ಯವಸ್ಥೆ ಜಾರಿಯಾದಲ್ಲಿ ಕಡಿಮೆ ಆದಾಯ ವರ್ಗದವರು ಬಳಸುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯ ಹೆಚ್ಚು ದುಬಾರಿ ಆಗಲಿದೆ.
ಈ ವಿಭಾಗದ ಮದ್ಯಗಳಲ್ಲಿ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ. 42.8ರಷ್ಟಿದೆ. ಇವೇ ನಾಲ್ಕು ಸ್ಲ್ಯಾಬ್‌ಗಳು ಒಟ್ಟು ಎಕ್ಸೈಸ್ ಆದಾಯದಲ್ಲಿ ಶೇ.80ರಷ್ಟು ಪಾಲು ಹೊಂದಿದ್ದು, ಕಳೆದ ವರ್ಷ 180 ಮಿಲಿ ಮದ್ಯದ ಬೆಲೆ 80ರಿಂದ 95 ರೂಪಾಯಿಗೆ ಏರಿಕೆಯಾಗಿತ್ತು. ಆದರೆ, ಹೊಸ ತೆರಿಗೆ ವ್ಯವಸ್ಥೆಯ ನಂತರ 105-110 ರೂ. ವರೆಗೆ ದರ ಏರಿಕೆಯಾಗುವ ಸಾಧ್ಯತೆಗಳಿವೆ. ಇದರಿಂದ ಮಧ್ಯಮ ಮತ್ತು ಕಡಿಮೆ ಆದಾಯದ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಪರಸಾ ಅವರು, ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ನಾಲ್ಕು ಸ್ಲ್ಯಾಬ್‌ಗಳಲ್ಲಿ ಬರುವ ಮದ್ಯ ಸಾಮಾನ್ಯ ಜನರಿಗೆ ಕೈಗೆಟುಕುವಂತಿದ್ದು. ಇದರ ಬೆಲೆ ಏರಿಕೆಯಿಂದ ಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಅಂತಿಮ ಅಧಿಸೂಚನೆಗೂ ಮುನ್ನ ಸರ್ಕಾರ ನಮ್ಮ ಸಲಹೆಗಳನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ ಎಂದು ತಿಲಿಸಿದ್ದಾರೆ.
ಇದೇ ವೇಳೆ ಸರ್ಕಾರವು ಈ ಬದಲಾವಣೆಯನ್ನು ಕರ್ನಾಟಕ ಅಬಕಾರಿ ಕಾಯ್ದೆ, 1965ರ ಸೆಕ್ಷನ್ 71 ಅಡಿಯಲ್ಲಿ ಜಾರಿಗೆ ತರಲು ಮುಂದಾಗಿದೆ. ಕರಡು ಅಧಿಸೂಚನೆಯನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಗಿದ್ದು, ಕೆಲ ದಿನಗಳ ನಂತರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಸರ್ಕಾರದ ಹೊಸ AIB ತೆರಿಗೆ ನೀತಿ ಜಾರಿಯಾದರೆ ರಾಜ್ಯದಲ್ಲಿ ಮದ್ಯದ ಬೆಲೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸುವುದು ಖಚಿತವಾಗಿದ್ದು, ಸಾಮಾನ್ಯ ಗ್ರಾಹಕರಿಂದ ಹಿಡಿದು ಉದ್ಯಮ ವಲಯದವರೆಗೆ ಇದರ ಪರಿಣಾಮ ಬೀರುವ ಸಾಧ್ಯತೆಗಳಿವೆ.