ಸಂಕೇಶ್ವರ: ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿದ್ದ ತಾಯಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದು, ಮಗನೂ ನಾಪತ್ತೆಯಾಗಿರುವ ಘಟನೆ ಸಂಕೇಶ್ವರ ಪಟ್ಟಣದ ಹೊರವಲಯದ ಹಿರಣ್ಯಕೇಶಿ ನದಿಯಲ್ಲಿ ಮಂಗಳವಾರ ನಡೆದಿದೆ.
ಸಂಕೇಶ್ವರ ಪಟ್ಟಣದ ನಿವಾಸಿ ಲಕ್ಷ್ಮೀ ಸುಧಾಕರ ಕುಟೋಳಿ (27) ಮೃತಪಟ್ಟಿದ್ದಾರೆ. ಮಗ ಸುಪ್ರೀತ ಸುಧಾಕರ ಕುಟೋಳಿ (9) ಸಹ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇನ್ನೂ ಮೃತದೇಹ ಸಿಕ್ಕಿಲ್ಲ. ಅಗ್ನಿ ಶಾಮಕ ದಳದಿಂದ ಹುಡುಕಾಟ ಮುಂದುವರಿದಿದೆ.
ಹಿರಣ್ಯಕೇಶಿ ನದಿ ತೀರದಲ್ಲಿರುವ ಶಂಕರಲಿಂಗ ದೇವಸ್ಥಾನಕ್ಕೆ ತಾಯಿ, ಮಗ ಬಂದಿದ್ದರು. ಬಳಿಕ ಸುಪ್ರೀತ್ ದೇವಸ್ಥಾನದ ಪಕ್ಕದಲ್ಲೇ ಇರುವ ಹಿರಣ್ಯಕೇಶಿ ನದಿಗೆ ಈಜಲು ಹೋಗಿದ್ದ. ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ಕಂಡು ರಕ್ಷಿಸಲು ಹೋಗಿದ್ದ ತಾಯಿ ಈಜು ಬಾರದೇ ಮುಳುಗಿ ಮೃತಪಟ್ಟಿದ್ದಾರೆ.
ಶೋಧ ಕಾರ್ಯಾಚರಣೆ ವೇಳೆ ತಾಯಿ ಲಕ್ಷ್ಮೀ ಅವರ ಮೃತದೇಹ ಪತ್ತೆಯಾಗಿದೆ. ನದಿ ತೀರದಲ್ಲಿ ಬಾಲಕನ ಬಟ್ಟೆಗಳು ಪತ್ತೆಯಾಗಿರುವುದರಿಂದ, ಆತನು ಮುಳುಗಿರುವ ಶಂಕೆ ದೃಢಪಟ್ಟಿದೆ. ಮಗುವಿನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.