ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಶನಿವಾರ ಮೈಸೂರು ಭೇಟಿ ನೀಡುತ್ತಿದ್ದು, ಇದನ್ನು ವಿರೋಧಿಸಿ ‘ಗೋ ಬ್ಯಾಕ್ ಮೋದಿ’ ಚಳುವಳಿ ನಡೆಸಲು ಮುಂದಾಗಿದ್ದ ದಲಿತ ಸಂಘರ್ಷ ಸಮಿತಿ(ದಸಂಸ) ಮುಖಂಡರು ಹಾಗೂ ಕಾರ್ಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ವಿವೇಕ ಸ್ಮಾರಕದ ಉದ್ಘಾಟನೆಗಾಗಿ ಮೈಸೂರಿಗೆ ಆಗಮಿಸುತ್ತಿದ್ದಾರೆ.
ಮೋದಿ ಭೇಟಿಯನ್ನು ವಿರೋಧಿಸಿ, ಮಾನಸಗಂಗೋತ್ರಿಯ ಕ್ಲಾಕ್ ಟವರ್ ಮುಂಭಾಗದಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದವರೆಗೆ ಜಾಥಾ ನಡೆಸಲು ದಸಂಸ ಮುಖಂಡರು ಮುಂದಾಗಿದ್ದರು. ಆದರೆ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ಕ್ಲಾಕ್ ಟವರ್ ಬಳಿ ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.
ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರನ್ನು ಶುಕ್ರವಾರ ರಾತ್ರಿ ಆಲನಹಳ್ಳಿ ಪೊಲೀಸರು ಅವರ ನಿವಾಸದಿಂದಲೇ ವಶಕ್ಕೆ ಪಡೆದಿದ್ದರು. ಆದರೂ ಹಿಂಜರಿಯದ ದಸಂಸ ಮುಖಂಡರು, ದಸಂಸ ರಾಜ್ಯ ಸಂಚಾಲಕ ಎಡದೊರೆ ಮಹದೇವಯ್ಯ ಅವರ ನೇತೃತ್ವದಲ್ಲಿ ‘ಗೋ ಬ್ಯಾಕ್ ಮೋದಿ’ ಚಳುವಳಿ ನಡೆಸಲು ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ಜಮಾಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ನಡೆಸದಂತೆ ಒಂದು ಗಂಟೆಗೂ ಹೆಚ್ಚು ಕಾಲ ದಸಂಸ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನಾಕಾರರು, “ನಾವು ಜಾಥಾ ನಡೆಸುವುದಿಲ್ಲ, ಕೇವಲ ಹತ್ತು ನಿಮಿಷ ಪ್ರತಿಭಟನೆಗೆ ಅವಕಾಶ ನೀಡಿ” ಎಂದು ಮನವಿ ಮಾಡಿದರೂ ಪೊಲೀಸರು ಅನುಮತಿ ನೀಡಲಿಲ್ಲ. ದಸಂಸ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ನಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.