ಬೆಂಗಳೂರು ಮೂಲದ ಉದ್ಯಮಿಯೊಬ್ಬರು, ನಗರದ ಸಂಚಾರ ದಟ್ಟಣೆಯ ಸಮಸ್ಯೆಗಳು ಉತ್ತಮ ಕೆಲಸವನ್ನು ಮಾಡುವ ಸಾಮರ್ಥ್ಯವನ್ನೇ 'ನಾಶಪಡಿಸುತ್ತಿವೆ' ಎಂದು ದೂರಿದ್ದಾರೆ. 'ಅಪ್ಲೈಡ್ ಎಐ ಸ್ಟುಡಿಯೋ' (Applied AI Studio) ಮತ್ತು 'ಅಪ್ಲೈಡ್ ಎಐ ಕ್ಲಬ್' (Applied AI Club) ಕಮ್ಯುನಿಟಿ ಸ್ಥಾಪಕರಾದ ಬಾಲಾ ಪನ್ನೀರ್‌ಸೆಲ್ವಂ ಅವರು ಲಿಂಕ್ಡ್‌ಇನ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಬೆಳಿಗ್ಗೆ 10.15 ಗಂಟೆಯಾದರೂ ತಮ್ಮ ಕಚೇರಿಯಲ್ಲಿ ಒಬ್ಬರ ಸುಳಿವು ಇಲ್ಲದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ದೀರ್ಘಕಾಲದ ಸಂಚಾರ ದಟ್ಟಣೆಯಿಂದಾಗಿ ಉದ್ಯೋಗಿಗಳಿಗೆ ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ.
ಕಚೇರಿಗೆ ಹಾಜರಾಗಲು ಉದ್ಯೋಗಿಗಳು ಪಡಬೇಕಾದ ಅಪಾರ ಶ್ರಮದ ಕಾರಣದಿಂದಾಗಿ, ಅವರು ಕೆಲಸದಲ್ಲಿ ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಲು ಆಗಾಗ್ಗೆ ಸಾಧ್ಯವಾಗುತ್ತಿಲ್ಲ ಎಂದು ಪನ್ನೀರ್‌ಸೆಲ್ವಂ ಹೇಳಿದ್ದಾರೆ.
'ಬೆಂಗಳೂರಿನ ಕಚೇರಿಯೊಂದು ಬೆಳಿಗ್ಗೆ 10.15ಕ್ಕೆ ಹೇಗಿರುತ್ತದೆ ಎಂಬುದನ್ನು ನೋಡಿ. ನಾವು ಕಚೇರಿಗೆ ಹಾಜರಾಗದಿದ್ದರೆ ಉತ್ತಮ ಕೆಲಸವನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಇಲ್ಲಿ ಸಮಸ್ಯೆಯಿರುವುದು ಜನರಲ್ಲಿ ಅಲ್ಲ, ಬದಲಿಗೆ ಕಚೇರಿಗೆ ಬಂದು ತಲುಪಲು ಬೇಕಾಗುವ ಶ್ರಮವೇ ಮುಖ್ಯ ಸಮಸ್ಯೆಯಾಗಿದೆ' ಎಂದು ಪನ್ನೀರ್‌ಸೆಲ್ವಂ ಹೇಳಿದರು.
ಕಡಿಮೆ ದೂರವನ್ನು ಕ್ರಮಿಸಲು ಕೂಡ ಸಾಕಷ್ಟು ಸಮಯ ಹಿಡಿಯುತ್ತದೆ ಮತ್ತು ಇದರಿಂದಾಗಿ ಕಚೇರಿಗೆ ತಲುಪುವಷ್ಟರಲ್ಲಿ ಉದ್ಯೋಗಿಗಳು ತಾಜಾತನವನ್ನು ಕಳೆದುಕೊಳ್ಳುತ್ತಾರೆ ಎಂಬ ಅಂಶವನ್ನು ಪನ್ನೀರ್‌ಸೆಲ್ವಂ ಎತ್ತಿ ತೋರಿಸಿದ್ದಾರೆ.
'HSR ಪ್ರದೇಶದಲ್ಲಿ 4 ಕಿಮೀ ದೂರವನ್ನು ಕ್ರಮಿಸಲು ಸ್ಕೂಟರ್‌ನಲ್ಲಿ 20 ನಿಮಿಷ ಮತ್ತು ಕಾರಿನಲ್ಲಿ 30 ನಿಮಿಷ ಬೇಕಾಗುತ್ತವೆ. ಇನ್ನು ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ (ಪೀಕ್ ಅವರ್ಸ್) ಇದಕ್ಕೆ ಇನ್ನೂ 10 ನಿಮಿಷಗಳನ್ನು ಸೇರಿಸಿಕೊಳ್ಳಬೇಕು. ಅಲ್ಲದೆ, ಸಿಗ್ನಲ್ ಉಲ್ಲಂಘಿಸಿ ಅಡ್ಡಾದಿಡ್ಡಿಯಾಗಿ ಬರುವ ದ್ವಿಚಕ್ರ ವಾಹನಗಳ ನಡುವೆ ವಾಹನ ಚಲಾಯಿಸಿ ಕಚೇರಿ ತಲುಪುವಷ್ಟರಲ್ಲಿ, ನೀವು ಸಂಪೂರ್ಣವಾಗಿ ಸುಸ್ತಾಗಿರುತ್ತೀರಿ' ಎಂದು ಅವರು ಹೇಳಿದರು.
'ಸಂಜೆ 6 ಗಂಟೆಯ ನಂತರ ಹೊರಟರೆ ಮನೆ ತಲುಪಲು ದುಪ್ಪಟ್ಟು ಸಮಯ ಹಿಡಿಯುತ್ತದೆ. ಒಂದು ವೇಳೆ ಸಂಜೆ 5 ಗಂಟೆಗೆ ಹೊರಟರೂ, ಮನೆ ತಲುಪುವಷ್ಟರಲ್ಲಿ ಅಷ್ಟೊಂದು ಸುಸ್ತಾಗಿರುತ್ತೀರಿ. ವೈಯಕ್ತಿಕ ಜೀವನದಲ್ಲಿ ಬೇರೇನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಸಹಜವಾಗಿಯೇ, ಮರುದಿನ ಜನರು ತಡವಾಗಿ ಕಚೇರಿಗೆ ಬರುತ್ತಾರೆ' ಎಂದಿದ್ದಾರೆ.
ಸಂಜೆ 4 ಗಂಟೆಯ ಸುಮಾರಿಗೆ ಅಂದರೆ ಮಳೆ ಅಥವಾ ಇತರ ಯಾವುದೇ ವಿಳಂಬಗಳಿಲ್ಲದ, ವಾಹನ ದಟ್ಟಣೆ ಕಡಿಮೆ ಇರುವ ಸಮಯದಲ್ಲಿ ವೈಟ್‌ಫೀಲ್ಡ್‌ನಿಂದ ಎಚ್‌ಎಸ್‌ಆರ್ ಲೇಔಟ್‌ಗೆ 17 ಕಿಮೀ ಪ್ರಯಾಣಿಸಲು ತಮಗೆ ಎರಡು ಗಂಟೆ ಹಿಡಿದಿದ್ದನ್ನು ಪನ್ನೀರ್‌ಸೆಲ್ವಂ ನೆನಪಿಸಿಕೊಂಡರು.
'ಈ ನಗರದಲ್ಲಿ ಉತ್ತಮ ಕೆಲಸ ಮಾಡುವ ನಮ್ಮ ಸಾಮರ್ಥ್ಯವನ್ನು ನಾವು ಸಂಪೂರ್ಣವಾಗಿ ಹಾಳುಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಸುತ್ತಲೂ ಅತಿಯಾದ ಶಬ್ದವಿದ್ದಾಗ, ನೀವು ಆಲೋಚಿಸಲು ಸಮಯವನ್ನು ಹೇಗೆ ಕಳೆಯುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ವ್ಯಾಪಕ ಗಮನ ಸೆಳೆಯುತ್ತಿದ್ದಂತೆ, ಸಾಮಾಜಿಕ ಜಾಲತಾಣದ ಬಳಕೆದಾರರು ಪನ್ನೀರ್‌ಸೆಲ್ವಮ್ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ; ನಗರದಲ್ಲಿನ ಇಂತಹ ಪರಿಸ್ಥಿತಿ ಈಗ ಒಂದು ರೀತಿಯಲ್ಲಿ 'ಸಾಮಾನ್ಯ' ಸಂಗತಿಯಾಗಿಬಿಟ್ಟಿದೆ ಎಂದೂ ಅವರು ಹೇಳಿದರು.
'ಇದು ಕೇವಲ ಸಮಯದ ವಿಷಯವಷ್ಟೇ ಅಲ್ಲ. ನಾನು ಪ್ರತಿದಿನ ಪ್ರಯಾಣಿಸಲು ಸರಾಸರಿ ಒಂದೂವರೆ ಯಿಂದ ಎರಡು ಗಂಟೆಗಳ ಸಮಯ ತೆಗೆದುಕೊಳ್ಳುತ್ತೇನೆ. ರಸ್ತೆಗಳಲ್ಲಿನ ಗುಂಡಿಗಳು ಮತ್ತು ಹಾಳಾದ ರಸ್ತೆಗಳು ತೀವ್ರವಾದ ಅನಾನುಕೂಲತೆಯನ್ನು ಉಂಟುಮಾಡುತ್ತವೆ' ಎಂದು ಒಬ್ಬ ಬಳಕೆದಾರರು ಹೇಳಿದರೆ, ಮತ್ತೊಬ್ಬರು, 'ಬಹುಶಃ ತಲುಪಲು ತೆಗೆದುಕೊಳ್ಳುವ ಸಮಯಕ್ಕಿಂತ ಹೆಚ್ಚಾಗಿ, ಅಲ್ಲಿಗೆ ತಲುಪುವಷ್ಟರಲ್ಲಿಯೇ ಅರ್ಧ ಸತ್ತಂತಾಗುವ ಸ್ಥಿತಿಯಿಂದಾಗಿ ಉತ್ಪಾದಕತೆಯ ನಷ್ಟ ಉಂಟಾಗುತ್ತದೆ' ಎಂದಿದ್ದಾರೆ.
ಮತ್ತೊಬ್ಬ ವ್ಯಕ್ತಿ, 'ಸಮಸ್ಯೆ ಏನೆಂದರೆ, ಬೆಂಗಳೂರಿನಲ್ಲಿ ಇದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ; ಅಲ್ಲಿ ವಾಸಿಸುವ ಅಥವಾ ಅಲ್ಲಿಗೆ ಬಂದು ನೆಲೆಸಿದ ಜನರು, ಸಮಯ, ಶಕ್ತಿ ಮತ್ತು ಸಂಪನ್ಮೂಲಗಳ ನಿರಂತರ ವ್ಯರ್ಥವಾಗುವಿಕೆಯನ್ನು ಜೀವನದ ಒಂದು ಭಾಗವೆಂಬಂತೆ ಪರಿಗಣಿಸುತ್ತಾರೆ. ತ್ವರಿತ ನಗರೀಕರಣ ಅಥವಾ ವಿಸ್ತರಣೆಯ ಹೆಸರಿನಲ್ಲಿ ಒಂದು ನಗರವು ನಿರ್ದಿಷ್ಟ ಮಿತಿಯವರೆಗೆ ಮಾತ್ರ ಒತ್ತಡವನ್ನು ತಡೆದುಕೊಳ್ಳಬಲ್ಲದು; ಮೂಲಭೂತ ಮೂಲಸೌಕರ್ಯಗಳಿಲ್ಲದಿದ್ದರೆ, ಅದು ಅಂತಿಮವಾಗಿ ಇಸ್ಪೀಟು ಎಲೆಗಳ ಗೋಪುರದಂತೆ ಕುಸಿದುಬೀಳುತ್ತದೆ' ಎಂದಿದ್ದಾರೆ.
'ಇತ್ತೀಚೆಗೆ ನಾನು ವೈಟ್‌ಫೀಲ್ಡ್‌ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ; ಶುಕ್ರವಾರದಂದು ಪ್ರಯಾಣಕ್ಕಾಗಿಯೇ ಮೂರು ಗಂಟೆಗಳು ವ್ಯರ್ಥವಾದ ಬಗ್ಗೆ ನಾನು ಆಗ ಯೋಚಿಸಿದ್ದು ನೆನಪಿದೆ. ಮನೆಗೆ ಮರಳುವಾಗ, ಅಲ್ಲಿ ನಡೆದ ಅಧಿವೇಶನಗಳು ಮತ್ತು ಸಂಭಾಷಣೆಗಳ ಬಗ್ಗೆ ಮೆಲುಕು ಹಾಕಲು ನನ್ನಲ್ಲಿ ಹೆಚ್ಚಿನ ಶಕ್ತಿಯೇ ಉಳಿದಿರಲಿಲ್ಲ' ಎಂದು ಇನ್ನೊಬ್ಬರು ತಿಳಿಸಿದ್ದಾರೆ.