ಹಾಸನ: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ನೀಡಿದ್ದ ಹೇಳಿಕೆಗೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆಯ ಮೀಸಲಾತಿ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್.ಡಿ ರೇವಣ್ಣ ಅವರು ಕೆ.ಎಸ್ ಲತಾಕುಮಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮೀಸಲಾತಿ ಪಟ್ಟಿ ಪ್ರಕಟಣೆಯಲ್ಲಿ ನಿಯಮ ಗಾಳಿಗೆ ತೂರಲಾಗಿದ್ದು ಕಡತಗಳನ್ನು ಬಾಕಿ ಇರಿಸಲಾಗಿದೆ ಎಂದು ರೇವಣ್ಣ ಆರೋಪಿಸಿದ್ದರು. ಅಲ್ಲದೆ ಇಂಥ ಜಿಲ್ಲಾಧಿಕಾರಿಗಳನ್ನು ಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೋ ಗೊತ್ತಿಲ್ಲ ಎಂದು ಮಾತನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಲತಾಕುಮಾರಿ ಅವರು, ನೀವು ಹೇಳಿದಂತೆ ಕೇಳದಿದ್ದರೆ ಅವರನ್ನು ದ್ವೇಷಿಸುತೀರಾ ಎಂದು ಪೋಸ್ಟ್ ಮಾಡಿದ್ದಾರೆ.
ನಾವು ನಿಯಮ ಮೀರಿದ್ದರೆ ಕಾನೂನಿನಲ್ಲಿ ಅವಕಾಶವಿದೆ, ಪತ್ರ ಬರೆಯಬಹುದಿತ್ತು. ಆದರೆ ಇಷ್ಟು ಹೀನಾಯವಾಗಿ, ಮಾನಸಿಕವಾಗಿ ನೋವಾಗುವಂತೆ ಮಾತನಾಡುವುದು ಹಿರಿಯ ರಾಜಕಾರಣಿಗೆ ಶೋಭೆಯಲ್ಲ. ಡಿಸಿ ಸ್ಥಾನದಲ್ಲಿದ್ದರೂ ಗೌರವ ಸಿಗುವುದಿಲ್ಲ ಎಂದರೆ ಹೇಗೆ? ಎಂದು ಆಕ್ರೋಶ ಹೊರಹಾಕಿದ್ದಾರೆ.