ಬೆಂಗಳೂರು: ರಾಜ್ಯದಲ್ಲಿ H1N1 ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಮಳೆಗಾಲದಲ್ಲಿ ಸಾಮಾನ್ಯವಾಗಿ ಇನ್‌ಫ್ಲುಯೆನ್ಸಾ ಪ್ರಕರಣಗಳು ಹೆಚ್ಚಾಗುತ್ತವೆ. ಹೀಗಾಗಿ ಪ್ರಸಕ್ತ ಏರಿಕೆ ನಿರೀಕ್ಷಿತ ಋತುಮಾನ ಮಾದರಿಯಲ್ಲೇ ಇದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದೆ. ಜೊತೆಗೆ, ಸೋಂಕು ಮತ್ತಷ್ಟು ಹೆಚ್ಚಾದರೂ ಎದುರಿಸಲು ಅಗತ್ಯ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಭರವಸೆ ನೀಡಿದೆ.
ಕರ್ನಾಟಕದಲ್ಲಿ ಸಾಮಾನ್ಯವಾಗಿ ವರ್ಷದಲ್ಲಿ ಎರಡು ಅವಧಿಯಲ್ಲಿ ಇನ್‌ಫ್ಲುಯೆನ್ಸಾ ಪ್ರಕರಣಗಳು ಹೆಚ್ಚಾಗುತ್ತವೆ. ಜನವರಿಯಿಂದ ಮಾರ್ಚ್‌ವರೆಗೆ ಹಾಗೂ ಜುಲೈನಿಂದ ಸೆಪ್ಟೆಂಬರ್‌ವರೆಗೆ ಪ್ರಕರಣಗಳ ಏರಿಕೆ ಕಂಡುಬರುತ್ತದೆ.
ಸಮಗ್ರ ಆರೋಗ್ಯ ಮಾಹಿತಿ ವೇದಿಕೆ (IHIP)ಯ ಕಣ್ಗಾವಲು ಮಾಹಿತಿಯ ಪ್ರಕಾರ, 2026ರ ಆಗಸ್ಟ್ 22ರವರೆಗೆ ರಾಜ್ಯದ 32 ಜಿಲ್ಲೆಗಳಲ್ಲಿ ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟ 4,212 ಇನ್‌ಫ್ಲುಯೆನ್ಸಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 2025ರಲ್ಲಿ 4,583 ಹಾಗೂ 2024ರಲ್ಲಿ 3,903 ಪ್ರಕರಣಗಳು ದಾಖಲಾಗಿದ್ದವು.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದ ಪ್ರಸ್ತುತ ಪರಿಸ್ಥಿತಿ ಹಾಗೂ ಮುನ್ನೆಚ್ಚರಿಕಾ ಸಿದ್ಧತೆಗಳನ್ನು ಪರಿಶೀಲಿಸಿದರು.
ಪ್ರಕರಣಗಳು ಮತ್ತಷ್ಟು ಹೆಚ್ಚಾದರೂ ಅಥವಾ ಏಕಾಏಕಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿದರೂ ನಿರ್ವಹಿಸಲು ರಾಜ್ಯದ ವೈದ್ಯಕೀಯ ಮೂಲಸೌಕರ್ಯ ಮತ್ತು ಅಗತ್ಯ ಔಷಧಗಳ ದಾಸ್ತಾನು ಸಮರ್ಪಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇನ್‌ಫ್ಲುಯೆನ್ಸಾ ಮಾದರಿಯ ಅನಾರೋಗ್ಯ (ILI) ಹಾಗೂ ತೀವ್ರ ಉಸಿರಾಟದ ಸೋಂಕು (SARI) ಕುರಿತ ಕಣ್ಗಾವಲನ್ನು ರಾಜ್ಯದಲ್ಲಿ ಬಲಪಡಿಸಲಾಗಿದೆ.
ICMR-NCDC ಜಾಲದಡಿ ಗುರುತಿಸಲಾಗಿರುವ ಕಣ್ಗಾವಲು ಕೇಂದ್ರಗಳು ಹಾಗೂ ವೈರಲ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳನ್ನು ಬಳಸಿ, ವಿವಿಧ ಉಸಿರಾಟದ ವೈರಸ್‌ಗಳ ಮೇಲ್ವಿಚಾರಣೆ, ಮಾದರಿ ಸಂಗ್ರಹಣೆ ಮತ್ತು ತ್ವರಿತ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಅಗತ್ಯ ವಸ್ತುಗಳ ದಾಸ್ತಾನು ಸಮರ್ಪಕವಾಗಿರುವಂತೆ ಸೂಚಿಸಲಾಗಿದೆ. ವೈಯಕ್ತಿಕ ಸುರಕ್ಷತಾ ಉಪಕರಣಗಳು (PPE) ಕಿಟ್, N95 ಮಾಸ್ಕ್‌ಗಳು ಹಾಗೂ ಇನ್‌ಫ್ಲುಯೆನ್ಸಾ ಚಿಕಿತ್ಸೆಯಲ್ಲಿ ಬಳಸುವ ಒಸೆಲ್ಟಾಮಿವಿರ್ ಆ್ಯಂಟಿವೈರಲ್ ಔಷಧವನ್ನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ.
ILI ಮತ್ತು SARI ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು, ಅಪಾಯದ ಮಟ್ಟವನ್ನು ಅಂದಾಜಿಸುವುದು ಹಾಗೂ ಸೂಕ್ತ ಚಿಕಿತ್ಸೆ ನೀಡುವ ಕುರಿತು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಖಾಸಗಿ ಆಸ್ಪತ್ರೆಗಳು ಕೂಡ H1N1 ಪ್ರಕರಣಗಳ ತಪಾಸಣೆ, ಪರೀಕ್ಷೆ ಮತ್ತು ಚಿಕಿತ್ಸೆಗೆ ರಾಜ್ಯದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅಲ್ಲದೆ, ದೃಢಪಟ್ಟ ಪ್ರಕರಣಗಳನ್ನು IHIP ಕಣ್ಗಾವಲು ವೇದಿಕೆಯ ಮೂಲಕ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚಿಸಲಾಗಿದೆ.
ಸೋಂಕು ನಿಯಂತ್ರಣ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕ್ರಮಗಳನ್ನೂ ಇಲಾಖೆ ಹೆಚ್ಚಿಸಿದೆ. ಉಸಿರಾಟದ ಸ್ವಚ್ಛತೆ ಕಾಪಾಡುವುದು, ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಹಾಗೂ ನಿಯಮಿತವಾಗಿ ಕೈಗಳನ್ನು ತೊಳೆಯುವಂತೆ ಜನರಿಗೆ ಸಲಹೆ ನೀಡಲಾಗಿದೆ.
ಲಕ್ಷಣಗಳು ಕಂಡುಬಂದರೆ ಸಾಕಷ್ಟು ನೀರು ಕುಡಿಯುವುದು, ಇತರರಿಂದ ಪ್ರತ್ಯೇಕವಾಗಿರುವುದು ಹಾಗೂ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ. ವೈದ್ಯರ ಸಲಹೆಯಿಲ್ಲದೆ ಸ್ವಯಂ ಔಷಧ ಸೇವಿಸದಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಲಕ್ಷಣಗಳಿರುವವರು ಜನಸಂದಣಿ ಇರುವ ಸ್ಥಳಗಳಿಗೆ ತೆರಳುವುದನ್ನು, ಹಸ್ತಲಾಘವ ಮಾಡುವುದನ್ನು ಹಾಗೂ ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇಪದೇ ಮುಟ್ಟುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ.
ವಿಶೇಷವಾಗಿ ಹೆಚ್ಚಿನ ಅಪಾಯದಲ್ಲಿರುವವರಲ್ಲಿ ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದರಿಂದ ಗಂಭೀರ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜನರು ಆತಂಕಪಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಋತುಮಾನ ಇನ್‌ಫ್ಲುಯೆನ್ಸಾ ಹರಡುವಿಕೆಯನ್ನು ನಿಯಂತ್ರಿಸಲು ಸಹಕರಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.