ಬೆಂಗಳೂರು: ಈದ್ ಮಿಲಾದ್ ಮೆರವಣಿಗೆ ವೇಳೆ ಬುಧವಾರ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಮಧ್ಯಾಹ್ನ 3.15ರ ಸುಮಾರಿಗೆ ಕುಮಾರಸ್ವಾಮಿ ಲೇಔಟ್‌ನಿಂದ ಈದ್ ಮಿಲಾದ್ ಮೆರವಣಿಗೆ ಕೆ.ಆರ್. ರಸ್ತೆಯ ಗರಡಿ ಅಪಾರ್ಟ್‌ಮೆಂಟ್ ಬಳಿ ಸಾಗುತ್ತಿದ್ದಾಗ ಘಟನೆ ನಡೆದಿದೆ.
ಮೆರವಣಿಗೆಯಲ್ಲಿ ಕೆಲವರು ಘೋಷಣೆಗಳನ್ನು ಕೂಗುತ್ತಿದ್ದ ವೇಳೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಅವರ ಸಹಚರರು ಕೇಸರಿ ಧ್ವಜ ಹಿಡಿದು ಮೆರವಣಿಗೆ ಎದುರು ಬಂದಿದ್ದರು.
ಈ ವೇಳೆ ಘೋಷಣೆ ಕೂಗದಂತೆ ಮೆರವಣಿಗೆಯಲ್ಲಿದ್ದವರಿಗೆ ತಡೆಯೊಡ್ಡಲು ಯತ್ನಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎನ್ನಲಾಗಿದೆ.
ಇದೇ ವೇಳೆ, ಕೆಲವರು ಮುರಳಿ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಬ್ದುಲ್ ರಜಾಕ್ ಖಾನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ, ಕಾನೂನುಬಾಹಿರವಾಗಿ ಗುಂಪುಗೂಡುವಿಕೆ, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳನ್ನು ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ, ರಾಮನಗರ ಜಿಲ್ಲೆಯ 26 ವರ್ಷದ ಗೋಪಿಗೌಡ, 24 ವರ್ಷದ ವಿನೋದ್ ನಾಯಕ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿ ದೂರು ದಾಖಲಿಸಿದ ಪುನೀತ್ ಕೆರೆಹಳ್ಳಿ
ಇದಕ್ಕೆ ಪ್ರತಿಯಾಗಿ ಪುನೀತ್ ಕೆರೆಹಳ್ಳಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಯತ್ನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ 18 ವರ್ಷದ ಅಖಿಲ್ ಪಾಷಾ, 24 ವರ್ಷದ ಅಬೂಬಕರ್ ಸಿದ್ದೀಕ್, 22 ವರ್ಷದ ಸೈಯದ್ ಅನಸ್ ಹಾಗೂ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ.
ರಸ್ತೆ ತಡೆ ಆರೋಪ; ಮತ್ತೊಂದು ಎಫ್‌ಐಆರ್
ಇದೇ ವೇಳೆ, ಬಸವನಗುಡಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಪುನೀತ್ ಕೆರೆಹಳ್ಳಿ ಹಾಗೂ ಇತರರ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ. ರಸ್ತೆ ಮೇಲೆ ಕುಳಿತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಈ ದೂರು ದಾಖಲಿಸಲಾಗಿದೆ.
ಘಟನೆಯ ಬಳಿಕ ಕೆರೆಹಳ್ಳಿ ಹಾಗೂ ಅವರ ಸಹಚರರು ರಸ್ತೆಯ ಮಧ್ಯೆ ಕುಳಿತು ಘೋಷಣೆಗಳನ್ನು ಕೂಗಿ ಸಾರ್ವಜನಿಕರು ಹಾಗೂ ಮೆರವಣಿಗೆಯ ಸಂಚಾರಕ್ಕೆ ಅಡ್ಡಿಪಡಿಸಿದ್ದರು ಎನ್ನಲಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸರು ಮುಂದಾದಾಗಲೂ ಕೆರೆಹಳ್ಳಿ ಸಹಕರಿಸದೆ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಿಎನ್‌ಎಸ್‌ನ ಸೆಕ್ಷನ್ 385ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.