ಬೆಂಗಳೂರು: ಚೀನಾ-ನೇಪಾಳ ಗಡಿಯಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಟಿಬೆಟ್‌ನ ಸಾಗಾ ಮತ್ತು ದಾರ್ಚಿನ್ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು, ಆತಂಕಕ್ಕೊಳಗಾಗಿದ್ದು,ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ವಾಯುಮಾರ್ಗದ ಮೂಲಕ ರಕ್ಷಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಮಾನಸ ಸರೋವರ ಯಾತ್ರೆಗೆ ತೆರಳಿ ಸದ್ಯ ಟಿಬೆಟ್‌ನ ಬೇಸ್ ಕ್ಯಾಂಪ್‌ಗಳಲ್ಲಿ ಸಿಲುಕಿರುವ ಕನ್ನಡಿಗರು ನೇಪಾಳದ ಗಡಿ ತಲುಪಲು ನ್ಯಾಲಮ್ ಮಾರ್ಗವಾಗಿ ಸುಮಾರು 12 ರಿಂದ 15 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದೆ. ಆದರೆ ಈ ಸಂಪೂರ್ಣ ರಸ್ತೆ ಮಾರ್ಗವು ಭಾರಿ ಭೂಕುಸಿತ, ಮಂಡಿಯುದ್ದ ಕೆಸರು ಮತ್ತು ಕಲ್ಲುಗಳು ಉರುಳುತ್ತಿರುವುದರಿಂದ ಅತ್ಯಂತ ಅಪಾಯಕಾರಿಯಾಗಿದೆ. ರಸ್ತೆಯ ಮಧ್ಯದಲ್ಲೇ ಸಿಲುಕಿಕೊಳ್ಳುವ ಭೀತಿಯಿಂದಾಗಿ, ಚೀನಾ ಇಮಿಗ್ರೇಷನ್ ಮುಗಿಸಿ ನೇಪಾಳದ ಗಡಿ ತಲುಪಿದ ತಕ್ಷಣ ತಮಗೆ ಏರ್‌ಲಿಫ್ಟ್ ಸೌಲಭ್ಯ ಕಲ್ಪಿಸಬೇಕು ಎಂದು ಯಾತ್ರಿಕರು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.
ನಾವು ನೇಪಾಳ ಭಾಗಕ್ಕೆ ತಲುಪಿದ ಬಳಿಕ ನಮ್ಮನ್ನು ವಾಯುಮಾರ್ಗದ ಮೂಲಕ ರಕ್ಷಿಸುವ ವ್ಯವಸ್ಥೆ ಮಾಡಬಹುದೇ? ಎಂದು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ ಧೈರ್ಯ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಎದುರಿಸುವಂತೆ ಶಿವಕುಮಾರ್ ಅವರು ಯಾತ್ರಿಕರಿಗೆ ತಿಳಿಸಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ದೆಹಲಿಗೆ ಆಗಮಿಸುವ ಕನ್ನಡಿಗರಿಗೆ ವಸತಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನೇಪಾಳ-ಟಿಬೆಟ್ ಗಡಿ ಹಾಗೂ ಟಿಬೆಟ್ ಸ್ವಾಯತ್ತ ಪ್ರದೇಶದ ಸುತ್ತಮುತ್ತ ಭಾರಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿರುವ ಸಂದರ್ಭದಲ್ಲಿ ಈ ಮಾತುಕತೆ ನಡೆದಿದೆ. ಪ್ರವಾಹ ಮತ್ತು ಭೂಕುಸಿತದಿಂದ ಜೀವಹಾನಿ ಸಂಭವಿಸಿದ್ದು, ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗುವುದರ ಜೊತೆಗೆ ರಸ್ತೆ ಸಂಪರ್ಕವೂ ಅಸ್ತವ್ಯಸ್ತಗೊಂಡಿದೆ.
ಶನಿವಾರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನೇಪಾಳ ಮತ್ತು ಟಿಬೆಟ್‌ನಲ್ಲಿ ಸಿಲುಕಿರುವ ಅಥವಾ ನಾಪತ್ತೆಯಾಗಿರುವ ಕರ್ನಾಟಕದ 28 ಮಂದಿಯ ವಿವರಗಳನ್ನು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಸಂಗ್ರಹಿಸಿದೆ. ಇವರಲ್ಲಿ 23 ಮಂದಿ ಬೆಂಗಳೂರು ನಗರ ಜಿಲ್ಲೆಯವರು, ಇಬ್ಬರು ಮೈಸೂರಿನವರು ಹಾಗೂ ಧಾರವಾಡ, ಉಡುಪಿ ಮತ್ತು ವಿಜಯನಗರ ಜಿಲ್ಲೆಗಳಿಂದ ತಲಾ ಒಬ್ಬರು ಇದ್ದಾರೆ.
ಬಹುತೇಕರು ನೇಪಾಳದ ರಸುವಾ ಜಿಲ್ಲೆಯ ಟಿಮುರೆ ಪ್ರದೇಶದಲ್ಲಿದ್ದು, ಕೆಲವರು ಟಿಬೆಟ್‌ನ ದರ್ಚೆನ್‌ನಲ್ಲಿ ಇರುವುದಾಗಿ ವರದಿಯಾಗಿದೆ. 28 ಮಂದಿಯಲ್ಲಿ ನಾಲ್ವರು ಸುರಕ್ಷಿತವಾಗಿರುವುದು ದೃಢಪಟ್ಟಿದ್ದು, ಅವರು ನೇಪಾಳದತ್ತ ಪ್ರಯಾಣಿಸುತ್ತಿದ್ದಾರೆ. ಉಳಿದ 24 ಮಂದಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರೊಂದಿಗೆ ಸಂಪರ್ಕದಲ್ಲಿದ್ದಾರೆ.
ಪರಿಸ್ಥಿತಿ ಬಿಗಡಾಯಿಸಿರುವ ಪ್ರದೇಶಗಳಲ್ಲಿರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲಿಯೇ ಇರುವಂತೆ, ಸ್ಥಳೀಯ ಅಧಿಕಾರಿಗಳು ಹಾಗೂ ಭಾರತೀಯ ರಾಯಭಾರ ಕಚೇರಿಗಳ ಸೂಚನೆಗಳನ್ನು ಪಾಲಿಸುವಂತೆ ಮತ್ತು ಅಪಾಯದ ಮಾರ್ಗಗಳಲ್ಲಿ ಪ್ರಯಾಣಿಸದಂತೆ ರಾಜ್ಯ ಸರ್ಕಾರ ಸಲಹೆ ನೀಡಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ.