ಕೊಪ್ಪಳ: ಇಸ್ಲಾಂ ಇಡೀ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಧರ್ಮವಾಗಿದ್ದು, ನನಗೆ ಹಜ್ ಯಾತ್ರೆಗೆ ಹೋಗುವ ಆಸೆಯಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಯರೆಡ್ಡಿ, ನಾನು ಹೆಚ್ಚಾಗಿ ಮಠ-ಮಂದಿರಕ್ಕೆ ಹೋಗಲ್ಲ. ಆದರೆ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.
ಇಸ್ಲಾಂ ಅತ್ಯಂತ ಮಾನವೀಯತೆಯಿಂದ ಕೂಡಿದ ಶ್ರೇಷ್ಠ ಧರ್ಮವಾಗಿದೆ. ಆದರೆ ಇಸ್ಲಾಂ ಧರ್ಮದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ. ಮನುಷ್ಯ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಈ ಧರ್ಮ ಹೇಳಿಕೊಡುತ್ತದೆ. ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಮಹಮ್ಮದ್ ಪೈಗಂಬರರು ಇಡೀ ಬ್ರಹ್ಮಾಂಡಕ್ಕೆ ಕುರಾನ್ ನೀಡಿದ್ದಾರೆ. ಯಾರು ಬೇಕಾದರೂ ಕುರಾನ್ ಓದಬಹುದು, ನಾನೂ ಸಹ ಕುರಾನ್ ಅಧ್ಯಯನ ಮಾಡಲು ಸಿದ್ಧನಿದ್ದೇನೆ ಎಂದರು.
ಜನರು ಮತಾಂಧರು ಮತ್ತು ಜಾತಿವಾದಿಗಳಾಗಬಾರದು. ಕೇವಲ ಮಸೀದಿಗೆ ಹೋಗಿ ‘ಅಲ್ಲಾಹು ಅಕ್ಬರ್’ ಎಂದ ಮಾತ್ರಕ್ಕೆ, ಅಥವಾ ದೇವಸ್ಥಾನಗಳಿಗೆ ಹೋದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ, ಎಲ್ಲಾ ಧರ್ಮಗಳಲ್ಲಿರುವ ಒಳ್ಳೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.