ಬೆಂಗಳೂರು: ನಾಳೆಯಿಂದ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ ಎಂಬ ಹೇಳಿಕೆ ನೀಡಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಸೋಮವಾರದಿಂದ ದರ ಏರಿಕೆ ಇರುವುದಿಲ್ಲ. ಕೇಂದ್ರ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಈ ಸೂಚನೆ ನೀಡಿದ್ದಾರೆ ಎಂದು ತೇಜಸ್ವಿ ಸೂರ್ಯ ಶನಿವಾರ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಹಿನ್ನೆಲೆಯಲ್ಲಿ ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಜ್ಯ ಕಾಂಗ್ರೆಸ್ ಪೋಸ್ಟ್ ಮಾಡಿದ್ದು, ಮೊದಲನೆಯದಾಗಿ, ನಮ್ಮ ಮೆಟ್ರೋ ದರ ಏರಿಕೆಯಲ್ಲಿ ಕೇಂದ್ರದ ಪಾತ್ರವಿಲ್ಲ ಎಂದು ತೇಜಸ್ವಿ ಸೂರ್ಯಅವರೇ ಹೇಳಿದ್ದರು.
ಈಗ ದೆಹಲಿಗೆ ಓಡಿಹೋಗಿ ದರ ಏರಿಕೆಗೆ ಯಾಕೆ ತಾತ್ಕಾಲಿಕವಾಗಿ ತಡೆ ನೀಡಿ ಎಂದು ಕೇಳುತ್ತಿದ್ದಾರೆ. ನಿಮಗೆ ದರ ನಿಗದಿ ಮಾಡುವ, ಪರಿಷ್ಕರಿಸುವ ಅಧಿಕಾರ ಇಲ್ಲವೆಂದ ಮೇಲೆ ದರ ಏರಿಕೆಗೆ ತಡೆ ನೀಡಲು ನಿಮಗೆ ಹೇಗೆ ಅಧಿಕಾರವಿದೆ ಎಂದು ಪ್ರಶ್ನಿಸಿದೆ.
ಸಾರ್ವಜನಿಕರ ಆಕ್ರೋಶ ಹೆಚ್ಚಾದಾಗ ನೀವು ಜವಾಬ್ದಾರಿಯಿಂದ ಕೈ ತೊಳೆದುಕೊಂಡು ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದೆ.