ಬೆಂಗಳೂರು: ಕೋಗಿಲು ನಿರಾಶ್ರಿತರಿಗೆ ಮಾನವೀಯತೆಯ ದೃಷ್ಟಿಯಿಂದ ಮನೆಗಳನ್ನು ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ತೀವ್ರವಾಗಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಪ್ರದೇಶವನ್ನು ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಸಾರ್ವಜನಿಕ ಬಳಕೆಗೆ ಮೀಸಲಿಡಲಾಗಿತ್ತು. ಕಾಂಗ್ರೆಸ್ ಹೈಕಮಾಂಡ್‌ನ ಹಸ್ತಕ್ಷೇಪ ಮತ್ತು ಕೇರಳ ನಾಯಕರ ಟೀಕೆ ಸೇರಿದಂತೆ ರಾಜಕೀಯ ಒತ್ತಡದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 7 ಕಿ.ಮೀ ದೂರದಲ್ಲಿರುವ ಬೈಯ್ಯಪ್ಪನಹಳ್ಳಿಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಅರ್ಹ ನಿರಾಶ್ರಿತರಿಗೆ ಪರ್ಯಾಯ ವಸತಿಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರ ಅತಿಕ್ರಮಣದಾರರಿಗೆ ಉಡುಗೊರೆ ಕೊಟ್ಟಂತಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ನಿಜವಾದ ಬಡವರು ವರ್ಷಗಳಿಂದ ವಸತಿಗಾಗಿ ಕಾಯುತ್ತಿದ್ದು, ಇದರ ನಡುವೆ ಅಕ್ರಮ ಅತಿಕ್ರಮಣದಾರರಿಗೆ ಮನೆಗಳನ್ನು ಹಂಚಿಕೆ ಮಾಡಿದರೆ, ಅಕ್ರಮ ಎಸಗಿದವರಿಗೆ ಉಡುಗೊರೆ ನೀಡದಂತಾಗಲಿದೆ. ಅತಿಕ್ರಮಣದಾರರಿಗೆ ಆದ್ಯತೆ ನೀಡಿದರೆ ಮತ್ತಷ್ಟು ಭೂಕಬಳಿಕೆಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಕಟ್ಟಡಗಳ ತೆರವು ಮಾಡಿದ್ದು, ಟೀಕೆಗೊಳಗಾದ ಬೆನ್ನಲ್ಲೇ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಆಶ್ರಯ ಯೋಜನೆ ಅಡಿ ಮನೆ ನೀಡುವುದಾಗಿ ಸರ್ಕಾರ ಹೇಳಿತ್ತು. ಅದರಂತೆ, ಜನವರಿ 2ಕ್ಕೆ ಮನೆ ಹಂಚಿಕೆ ಆಗಲಿದೆ ಎಂದೂ ಹೇಳಲಾಗಿತ್ತು.