ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 
ರಾಜ್ಯ

ಕಾರ್ಯಶೈಲಿ ಬದಲಾಯಿಸಿ, BDAಗೆ ಅಂಟಿರುವ ಕಳಂಕ ತೊಡೆದು ಹಾಕಿ: ಅಧಿಕಾರಿಗಳಿಗೆ ಡಿ.ಕೆ ಶಿವಕುಮಾರ್ ತಾಕೀತು

ನನ್ನದೇ ಆದ ರೀತಿಯ ಇಂಟಿಲಿಜೆನ್ಸ್ ಮೂಲಕ ನಿಮ್ಮಲ್ಲಿ ನಡೆಯುತ್ತಿರುವ ಸಂತೆ, ದಂಧೆ, ಏಜೆಂಟ್‌ಗಳ ಪಟ್ಟಿ ಪಡೆಯಲು ಆರು ತಿಂಗಳು ಬೇಕಾಯಿತು. ಪ್ರತಿ ಹಂತದಲ್ಲಿ ಎಷ್ಟು ಕೊಳಕಿದೆ, ಎಷ್ಟು ಒಳ್ಳೆಯದಿದೆ ಎಂಬುದನ್ನು ಅರಿತಿದ್ದೇನೆ.

ಬೆಂಗಳೂರು: ಕಾರ್ಯಶೈಲಿ ಬದಲಾಯಿಸಿಕೊಂಡು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ) ಕ್ಕೆ ಅಂಟಿಕೊಂಡಿರುವ ಕಳಂಕವನು ತೊಡೆದು ಹಾಕಿ ಎಂದು ನಗರದ ಬಿಡಿಎ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.

ಮಂಗಳವಾರ ಬಿಡಿಎ ಆಡಳಿತ ಸುಧಾರಣೆಗಳು, ಸಾರ್ವಜನಿಕ ಅಹವಾಲು ನಿರ್ವ ಹಣೆ ಕುರಿತು ಬಿಡಿಎ ನೌಕರರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಶಿವಕುಮಾರ್ ಅವರು ಮಾತನಾಡಿದರು.

ನನ್ನದೇ ಆದ ರೀತಿಯ ಇಂಟಿಲಿಜೆನ್ಸ್ ಮೂಲಕ ನಿಮ್ಮಲ್ಲಿ ನಡೆಯುತ್ತಿರುವ ಸಂತೆ, ದಂಧೆ, ಏಜೆಂಟ್‌ಗಳ ಪಟ್ಟಿ ಪಡೆಯಲು ಆರು ತಿಂಗಳು ಬೇಕಾಯಿತು. ಪ್ರತಿ ಹಂತದಲ್ಲಿ ಎಷ್ಟು ಕೊಳಕಿದೆ, ಎಷ್ಟು ಒಳ್ಳೆಯದಿದೆ ಎಂಬುದನ್ನು ಅರಿತಿದ್ದೇನೆ. ಹೀಗಾಗಿ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಲು ತೀರ್ಮಾನಿಸಲಾಗಿದೆ.

ಕೆಲವರಿಗೆ ಇದರಿಂದ ಸಮಾಧಾನ ಆಗದಿರಬಹುದು. ಶೇಕಡ 10 ರಷ್ಟು ಸಿಬ್ಬಂದಿಯಿಂದ ಇಡೀ ಬಿಡಿಎಗೆ ಕೆಟ್ಟ ಹೆಸರು ಬರುತ್ತಿದೆ. ಆತ್ಮಸಾಕ್ಷಿಗೆ ಒಪ್ಪುವಂತೆಯಾದರೂ ಬಿಡಿಎ ಘನತೆಯನ್ನು ಬದಲಿಸಿಕೊಂಡು ಹೋಗಬೇಕು. ಈ ಬಗ್ಗೆ ಮಾರ್ಗದರ್ಶನ ನೀಡಲು ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಬಿಡಿಎ ಹಾಗೂ ಜಿಬಿಎ ಬೆಂಗಳೂರಿನ ಮುಖವಾಣಿ. ಪ್ರತಿ ಕಡತವನ್ನು ಕೊಕ್ಕೆ ಹಾಕಿ ಓಡಾಡಿಸುವ ಬದಲು ಸಕಾರಾತ್ಮಕ ಮನೋಭಾವದಲ್ಲಿ ಪರಿಹಾರ ಹುಡುಕಿ. ತಪ್ಪು ಮಾಡಿ ನನ್ನ ಕಣ್ಣಿಗೆ ಬೀಳಬೇಡಿ. ಬಿದ್ದರೆ ಬಡಿದು ಬಿಸಾಕುತ್ತೇನೆ. ಪ್ರಕರಣ ದಾಖಲಿಸಿದ ಬಳಿಕ, ಯಾರಿಂದ ಶಿಫಾರಸ್ಸು ತಂದರೂ ಬಗ್ಗುವುದಿಲ್ಲ. ‘ನಾಗರಿಕರು ಬಂದಾಗ ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಬೇಕು. ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುತ್ತಾ ಹೋದರೆ, ಆಗುವುದಿಲ್ಲ. ಉದಾರ ಮನಸ್ಸಿನಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅಧಿಕಾರ ಇದ್ದಾಗ ಬೇರೆಯವರಿಗೆ ಸಹಾಯ ಮಾಡಿ, ತೊಂದರೆ ಮಾಡಬೇಡಿ. ಅಂತಾರಾಷ್ಟ್ರೀಯಮಟ್ಟದಲ್ಲಿರುವ ಬೆಂಗಳೂರಿಗೆ ನೌಕರರ ಶಿಸ್ತು ಹಾಗೂ ಪ್ರಾಮಾಣಿಕತೆ ಅಗತ್ಯವಿದೆ. ಸಮಗ್ರವಾಗಿ ಬೆಂಗಳೂರು ನಗರ ಕಟ್ಟುವಲ್ಲಿ ಎಲ್ಲರ ಕೊಡುಗೆಯೂ ಇರಲಿದೆ ಎಂದು ಹೇಳಿದರು.

ಬಿಡಿಎ ಹಾಗೂ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜ.17ಕ್ಕೆ ಬಿಡಿಎ ರಚನೆಯಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಈ ಸಂಭ್ರಮಾಚರಣೆ ವೇಳೆ ಹೆಗ್ಗುರುತು ಬಿಟ್ಟು ಹೋಗಲು ನನ್ನ ಹಾಗೂ ಬಿಡಿಎ ಅಧ್ಯಕ್ಷ ಹ್ಯಾರಿಸ್ ಅವರ ತಂಡದ ಅಭಿಲಾಶೆಯಾಗಿದೆ. ಇದಕ್ಕೆ ಬಿಡಿಎನಲ್ಲಿ ಪಾರದರ್ಶಕತೆ ತರಬೇಕು, ನೊಂದ ಜನರು ಬಿಡಿಎ ಬಳಿಗೆ ಗೌರವಯುತವಾಗಿ ಬರುವಂತಾಗಬೇಕು ಎಂದು ತಿಳಿಸಿದರು.

ಟೌನ್ ಪ್ಲಾನಿಂಗ್ ಗೆ ಸಿವಿಲ್ ಹಾಗೂ ಆರ್ಕಿಟೆಕ್ಟರ್‌ ಎಂಜಿನಿಯರ್‌ ಹೊರತಾಗಿ ಬೇರೆ ಎಂಜಿನಿಯರ್‌ಗಳು ಬರುತ್ತಿದ್ದಾರೆ. ಹೀಗಾಗಿ ಕೆಂಪೇಗೌಡ ಪ್ರಾಧಿಕಾರದ ಜಾಗದಲ್ಲಿ ವಿಟಿಯು ಮೂಲಕ ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಆರಂಭಿಸಲು ಮುಂದಾಗಿದ್ದೇನೆ. ಮುಂದಿನ ಎಲ್ಲಾ ನಗರಗಳಲ್ಲಿ ಯೋಜನೆ ರೂಪಿಸಬೇಕು.

ಪ್ಲಾನಿಂಗ್ ವಿಚಾರದಲ್ಲಿ ಮೈಸೂರು ನಗರ ಬೆಂಗಳೂರಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ ಜಯನಗರ, ಮಲ್ಲೇಶ್ವರ, ಚಾಮರಾಜಪೇಟೆ ಹೊರತಾಗಿ ಬೇರೆ ಪ್ರದೇಶಗಳಲ್ಲಿ ಹೇಳಿಕೊಳ್ಳುವ ಯೋಜನೆ ರೂಪಿಸಿಲ್ಲ. ಇದಕ್ಕೆ ಅಧಿಕಾರಿಗಳು ಮಾತ್ರ ಕಾರಣವಲ್ಲ. ಆಡಳಿತ ನಡೆಸುವ ರಾಜಕಾರಣಿಗಳು, ಬಿಡಿಎ ಮುನ್ನಡೆಸಿರುವ ಆಯುಕ್ತರು, ಟೌನ್ ಪ್ಲಾನರ್ ಸೇರಿದಂತೆ ಎಲ್ಲರ ತಪ್ಪು ಇದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

I-PAC ಮೇಲೆ ಇಡಿ ದಾಳಿ ಖಂಡಿಸಿ ಅಮಿತ್ ಶಾ ಕಚೇರಿ ಹೊರಗೆ ಪ್ರತಿಭಟನೆ: ಟಿಎಂಸಿ ಸಂಸದರ ಬಂಧನ-Video

ಮಿನಿಯಾಪೊಲಿಸ್ ಶೂಟಿಂಗ್: ICE ಅಧಿಕಾರಿಗಳಿಂದ ಗುಂಡಿಟ್ಟು ಮಹಿಳೆ ಹತ್ಯೆ, ‘ಸ್ವಯಂರಕ್ಷಣೆ ಕ್ರಮ’ ಎಂದು ಟ್ರಂಪ್ ಸಮರ್ಥನೆ

"ನನಗೆ ಯಾವುದೇ ಅಂತಾರಾಷ್ಟ್ರೀಯ ಕಾನೂನುಗಳೂ ಬೇಕಿಲ್ಲ"- ಗ್ರೀನ್ ಲ್ಯಾಂಡ್ ವಶದ ಬಗ್ಗೆ ಟ್ರಂಪ್ ಸುಳಿವು

'ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ'- ಅಮೆರಿಕ ವಾಣಿಜ್ಯ ಕಾರ್ಯದರ್ಶಿ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ; ಸಿದ್ದರಾಮಯ್ಯ ತೀವ್ರ ಆಕ್ರೋಶ

SCROLL FOR NEXT