ಸಿದ್ದರಾಮಯ್ಯ ಮತ್ತು ಪಿಣರಾಯಿ ವಿಜಯನ್ 
ರಾಜ್ಯ

ಮಲಯಾಳಂ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್ಕೆ: ಕೇರಳ ಸಿಎಂಗೆ ಸಿದ್ದರಾಮಯ್ಯ ಪತ್ರ, ಪುನರ್ ಪರಿಶೀಲನೆಗೆ ಒತ್ತಾಯ

ಕಾಸರಗೋಡಿನಂತಹ ಗಡಿ ಪ್ರದೇಶಗಳು ಈ ತತ್ವದ ಜೀವಂತ ಉದಾಹರಣೆಗಳಾಗಿವೆ. ಅಲ್ಲಿ ಮಲಯಾಳಂ, ಕನ್ನಡ, ತುಳು, ಬ್ಯಾರಿ ಮತ್ತು ಇತರ ಭಾಷೆಗಳನ್ನಾಡುವ ಜನರು ತಲೆಮಾರುಗಳಿಂದ ಸಾಮರಸ್ಯದಿಂದ ಜೀವನ, ಶಿಕ್ಷಣ ಮತ್ತು ಗುರುತನ್ನು ರೂಪಿಸಿಕೊಂಡಿದ್ದಾರೆ.

ಬೆಂಗಳೂರು: ಕೇರಳ ಸರ್ಕಾರದ ‘ಮಲಯಾಳಿ ಭಾಷಾ ಮಸೂದೆ-2025’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾಷೆಯು ಕೇವಲ ಶೈಕ್ಷಣಿಕ ಆಯ್ಕೆಯಲ್ಲ, ಅದು ಅವರ ಅಸ್ಮಿತೆ, ಘನತೆ ಮತ್ತು ಅವಕಾಶಗಳಿಗೆ ದಾರಿಯಾಗಿದೆ. ಒಂದೇ ಭಾಷಾ ಮಾರ್ಗವನ್ನು ಕಡ್ಡಾಯಗೊಳಿಸುವ ಯಾವುದೇ ನೀತಿಯು ಮಕ್ಕಳ ಮೇಲೆ ಅನಗತ್ಯ ಹೊರೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ಅವರು, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಕೇವಲ ಭೌಗೋಳಿಕತೆಯಿಂದ ಮಾತ್ರವಲ್ಲದೆ, ಆಳವಾದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಮಾನವೀಯ ಸಂಬಂಧಗಳಿಂದ ಬೆಸೆದುಕೊಂಡ ರಾಜ್ಯಗಳಾಗಿವೆ. ಎರಡೂ ರಾಜ್ಯಗಳು ಸುದೀರ್ಘ ಸಂಬಂಧವನ್ನು ಹೊಂದಿದ್ದು, ಸಾಂವಿಧಾನಿಕ ಜವಾಬ್ದಾರಿಯ ಮನೋಭಾವದಿಂದ ಪತ್ರವನ್ನು ಬರೆದಿದ್ದೇನೆಂದು ಹೇಳಿದ್ದಾರೆ.

ಪರಸ್ಪರ ಗೌರವ, ಒಕ್ಕೂಟ ವ್ಯವಸ್ಥೆಯೊಳಗಿನ ಸಹಕಾರ ಮತ್ತು ಸಾಂವಿಧಾನಿಕ ಜವಾಬ್ದಾರಿಯ ಭಾವನೆಯಿಂದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಮೌಲ್ಯಗಳು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಸಂಬಂಧವನ್ನು ದೀರ್ಘಕಾಲದಿಂದ ಮಾರ್ಗದರ್ಶನ ಮಾಡುತ್ತಿದೆ. ಈ ಎರಡು ರಾಜ್ಯಗಳು ಕೇವಲ ಭೌಗೋಳಿಕವಾಗಿ ಮಾತ್ರವಲ್ಲ, ಆಳವಾದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಮಾನವೀಯ ಬಂಧಗಳಿಂದ ಬೆಸೆದುಕೊಂಡಿವೆ.

ಈ ಸಂದರ್ಭದಲ್ಲಿ, ಪ್ರಸ್ತಾಪಿತ ಮಲಯಾಳಂ ಭಾಷಾ ಮಸೂದೆಯ ಬಗ್ಗೆ ನನಗಿರುವ ಗಂಭೀರ ಕಳವಳವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಮಸೂದೆಯು ಕನ್ನಡ ಮಾಧ್ಯಮದ ಶಾಲೆಗಳಲ್ಲೂ, ವಿಶೇಷವಾಗಿ ಕಾಸರಗೋಡಿನಂತಹ ಗಡಿ ಜಿಲ್ಲೆಗಳಲ್ಲಿ ಮೊದಲ ಭಾಷೆಯನ್ನಾಗಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವುದನ್ನು ಒಳಗೊಂಡಿದೆ.

ಭಾರತದ ನಾಗರಿಕತೆಯ ಶಕ್ತಿಯು ಯಾವಾಗಲೂ ನಿರ್ಭೀತ ಬಹುತ್ವದ ಮೇಲೆ ನಿಂತಿದೆ. ನಮ್ಮ ದೇಶದಲ್ಲಿ ಭಾಷೆಗಳು ಕಡ್ಡಾಯತೆಯ ಬದಲಿಗೆ ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮೂಲಕ ವಿಕಸನಗೊಂಡಿವೆ. ಕಾಸರಗೋಡಿನಂತಹ ಗಡಿ ಪ್ರದೇಶಗಳು ಈ ತತ್ವದ ಜೀವಂತ ಉದಾಹರಣೆಗಳಾಗಿವೆ. ಅಲ್ಲಿ ಮಲಯಾಳಂ, ಕನ್ನಡ, ತುಳು, ಬ್ಯಾರಿ ಮತ್ತು ಇತರ ಭಾಷೆಗಳನ್ನಾಡುವ ಜನರು ತಲೆಮಾರುಗಳಿಂದ ಸಾಮರಸ್ಯದಿಂದ ಜೀವನ, ಶಿಕ್ಷಣ ಮತ್ತು ಗುರುತನ್ನು ರೂಪಿಸಿಕೊಂಡಿದ್ದಾರೆ.

ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾಷೆಯು ಕೇವಲ ಶೈಕ್ಷಣಿಕ ಆಯ್ಕೆಯಲ್ಲ; ಅದು ಅವರ ಅಸ್ಮಿತೆ, ಘನತೆ ಮತ್ತು ಅವಕಾಶಗಳಿಗೆ ದಾರಿಯಾಗಿದೆ. ಒಂದೇ ಭಾಷಾ ಮಾರ್ಗವನ್ನು ಕಡ್ಡಾಯಗೊಳಿಸುವ ಯಾವುದೇ ನೀತಿಯು ಮಕ್ಕಳ ಮೇಲೆ ಅನಗತ್ಯ ಹೊರೆಯನ್ನು ಹಾಕುವ ಸಾಧ್ಯತೆಯನ್ನು ಹೊಂದಿದೆ, ಭಾಷಾ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಈ ಸಮುದಾಯಗಳಿಗೆ ನಂಬಿಕೆ ಜೊತೆಗೆ ಅವಿರತ ಸೇವೆ ಸಲ್ಲಿಸುತ್ತಿರುವ ದೀರ್ಘಕಾಲೀನ ಶೈಕ್ಷಣಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ, ವಿಶೇಷವಾಗಿ ಗಡಿ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಜನರು ಕನ್ನಡದಲ್ಲಿ ಶಿಕ್ಷಣವನ್ನು ಅವಲಂಬಿಸಿದ್ದಾರೆ, ಇವರು ಕನ್ನಡ ಭಾಷಾ ಶಿಕ್ಷಣವನ್ನು ಕಲಿಯಲು ಬಯಸುತ್ತಾರೆ ಎಂಬುದು ವಾಸ್ತವಾಂಶ. ಅವರ ಈ ಆದ್ಯತೆಯು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂವಹನದ ಮೂಲಕ ಸ್ವಾಭಾವಿಕವಾಗಿ ವಿಕಸನಗೊಂಡಿದೆ. ಈ ಸತ್ಯವನ್ನು ಗೌರವಿಸುವುದು ಮಲಯಾಳಂ ಅನ್ನು ದುರ್ಬಲಗೊಳಿಸುವುದಿಲ್ಲ; ಬದಲಿಗೆ ಭಾರತದ ಬಹುತ್ವದ ಬೇರನ್ನು ಬಲಪಡಿಸುತ್ತದೆ.

ನಮ್ಮ ಸಂವಿಧಾನವು ಭಾಷಾ ಅಲ್ಪಸಂಖ್ಯಾತರಿಗೆ ಸ್ಪಷ್ಟ ರಕ್ಷಣೆಯನ್ನು ನೀಡುತ್ತದೆ. ಅನುಚ್ಛೇದ 29 ಮತ್ತು 30 ಭಾಷೆಯನ್ನು ಸಂರಕ್ಷಿಸುವ ಹಕ್ಕು ಮತ್ತು ಇಚ್ಛೆಗನುಗುಣವಾಗಿ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ಹಕ್ಕನ್ನು ಖಾತರಿಪಡಿಸುತ್ತವೆ. ಅನುಚ್ಛೇದ 350ಎ ಮಾತೃಭಾಷೆಯಲ್ಲಿ ಶಿಕ್ಷಣದ ಸೌಲಭ್ಯಗಳನ್ನು ಕಡ್ಡಾಯಗೊಳಿಸುತ್ತದೆ, ಮತ್ತು ಅನುಚ್ಛೇದ 350ಬಿ ಅಲ್ಪಸಂಖ್ಯಾತ ಭಾಷಾ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ರಾಜ್ಯಕ್ಕೆ ಒಪ್ಪಿಸುತ್ತದೆ. ಯಾವುದೇ ಕಾನೂನು ಕ್ರಮವು ಸಾಂವಿಧಾನಿಕ ಕಾನೂನುಬದ್ಧತೆಯನ್ನು ಮಾತ್ರವಲ್ಲ, ಸಾಂವಿಧಾನಿಕ ನೈತಿಕತೆಯನ್ನೂ ಪ್ರತಿಬಿಂಬಿಸಬೇಕು ಎಂದು ಹೇಳಿದ್ದಾರೆ.

ಕರ್ನಾಟಕವು ಸಾಮಾಜಿಕ ಸುಧಾರಣೆ, ಸಮಾನತೆ ಮತ್ತು ಸಮುದಾಯಿಕ ಚಿಂತನೆಗಳಿಂದ ರೂಪುಗೊಂಡ ಕನ್ನಡ ಭಾಷೆಯಲ್ಲಿ ಅಪಾರ ಹೆಮ್ಮೆಯನ್ನು ಹೊಂದಿದೆ. ಅದೇ ಸಮಯದಲ್ಲಿ, ಒಂದು ಭಾಷೆಯನ್ನು ಉತ್ತೇಜಿಸುವುದು ಮತ್ತೊಬ್ಬರ ಮೇಲೆ ಹೇರುವಿಕೆಯಾಗಬಾರದು ಎಂಬ ತತ್ವವನ್ನು ನಾವು ಯಾವಾಗಲೂ ಎತ್ತಿಹಿಡಿದಿದ್ದೇವೆ. ಈ ನಂಬಿಕೆಯು ನಮ್ಮ ನೀತಿಗಳನ್ನು ಮಾರ್ಗದರ್ಶಿಸಿದೆ ಮತ್ತು ಸಾಮರಸ್ಯಕ್ಕೆ ನಮ್ಮ ಬದ್ಧತೆಯನ್ನು ಪ್ರತಿಫಲಿಸುತ್ತದೆ.

ಆದ್ದರಿಂದ, ಕೇರಳ ಸರ್ಕಾರವು ಕಾಯ್ದೆ ಜಾರಿಗೆ ಮುನ್ನ ಭಾಷಾ ಅಲ್ಪಸಂಖ್ಯಾತ ಸಮುದಾಯಗಳು, ಶಿಕ್ಷಣ ತಜ್ಞರು ಮತ್ತು ನೆರೆಯ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು ಹಾಗೂ ತನ್ನ ಪ್ರಸ್ತಾಪಿತ ಮಸೂದೆಯನ್ನು ಪುನರ್ ಪರಿಶೀಲನೆಗೆ ಒಡ್ಡಬೇಕೆಂದು ಕೋರುತ್ತೇನೆ. ಇಂತಹ ಸಂವಾದವು ಭಾರತದ ಐಕ್ಯತೆಯನ್ನು ಬಲಪಡಿಸುತ್ತದೆ ಮತ್ತು ಪ್ರತಿ ಭಾಷೆ ಮತ್ತು ಪ್ರತಿ ನಾಗರಿಕನ ಘನತೆಯನ್ನು ಕಾಪಾಡುತ್ತದೆ.

ಈ ಮಸೂದೆ ಅಂಗೀಕಾರಗೊಂಡರೆ, ಕರ್ನಾಟಕವು ಲಭ್ಯವಿರುವ ಪ್ರತಿ ಸಾಂವಿಧಾನಿಕ ಹಕ್ಕನ್ನು ಬಳಸಿಕೊಂಡು ಭಾಷಾ ಅಲ್ಪಸಂಖ್ಯಾತರ ರಕ್ಷಣೆಗಾಗಿ ಮತ್ತು ನಮ್ಮ ಒಕ್ಕೂಟ ವ್ಯವಸ್ಥೆಯ ಬಹುತ್ವ ಚಿಂತನೆಯನ್ನು ಕಾಪಾಡಲು ವಿರೋಧಿಸಲಿದೆ. ಇದು ವಿರೋಧಿಸುವ ನಕಾರಾತ್ಮಕ ಉದ್ದೇಶವಾಗಿರದೆ, ಸಂವಿಧಾನ ಮತ್ತು ಜನರ ಧ್ವನಿಯನ್ನು ಎಂದಿಗೂ ಅಡಗಿಸಬಾರದು ಎಂಬ ನಮ್ಮ ಕರ್ತವ್ಯವಾಗಿರಲಿದೆ. ಪ್ರತಿ ಭಾಷೆಯು ಸ್ವತಂತ್ರವಾಗಿ ವಿಕಸನಗೊಳ್ಳಲು ಇರುವ ಅಡೆಗಡೆಗಳ ನಿವಾರಣೆಗೆ ಸಂವಿಧಾನಿಕ ಮೌಲ್ಯಗಳು ಹಾಗೂ ಪರಸ್ಪರ ಸಂವಾದವು ನಮಗೆ ಮಾರ್ಗದರ್ಶನ ನೀಡಲಿವೆ ಎಂದು ನಂಬಿದ್ದೇನೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

SCROLL FOR NEXT