ಬೆಂಗಳೂರು: ಬೆಂಗಳೂರಿನ ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಆರು ಪ್ರಾಧ್ಯಾಪಕರನ್ನು ಕೆಲಸದಿಂದ ವಜಾಗೊಳಿಸಿದೆ. OMR ವಿಭಾಗದ ಪ್ರಾಧ್ಯಾಪಕರಾದ ಡಾ. ಸಿಂಧು, ಡಾ. ಸುಶ್ಮಿನಿ, ಡಾ. ಆಲ್ಬಾ, ಡಾ. ಅನಿಮೋಲ್, ಡಾ. ಪೈಕಾ, ಡಾ. ಶಬಾನಾ ಅವರನ್ನು ವಜಾಗೊಳಿಸಲಾಗಿದೆ. ಪ್ರಾಧ್ಯಾಪಕರ ವಿರುದ್ಧ ಎಫ್ಐಆರ್ ಮತ್ತು ವಿದ್ಯಾರ್ಥಿಗಳಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಆರು ಮಂದಿ ಪ್ರಾಧ್ಯಾಪಕರನ್ನು ವಜಾ ಮಾಡಲಾಗಿದೆ.
ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಯಶಸ್ವಿನಿ ತಾಯಿ ದೂರಿನ ಮೇರೆಗೆ ಪ್ರಾಂಶುಪಾಲೆ ಪ್ರಿಯಾ ಸುಬ್ರಮಣಿ ಸೇರಿ 7 ಪ್ರಾಧ್ಯಾಪಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಜನವರಿ 8ರಂದು ಚಂದಾಪುರದ ಮನೆಯಲ್ಲಿ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದರು. ಯಶಸ್ವಿನಿ ಆತ್ಮಹತ್ಯೆಗೆ ಕಾಲೇಜು ಪ್ರಾಧ್ಯಾಪಕರ ಕಿರುಕುಳ ಎಂದು ಆರೋಪಿಸಲಾಗಿತ್ತು. ಸಹಪಾಠಿಗಳ ಮುಂದೆ ಯಶಸ್ವಿನಿಯ ಮೈಬಣ್ಣ ಮತ್ತು ಡ್ರೆಸ್ ಬಗ್ಗೆ ಪ್ರಾಧ್ಯಾಪಕರ ಟೀಕಿಸಿದ್ದರು. ಡಾ. ಪ್ರಿಯಾ ವಿರುದ್ಧವೂ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಎಂದು ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ. ರಮೇಶ್ ಹೇಳಿದ್ದಾರೆ.