ಬೆಂಗಳೂರು: ಬೆಂಗಳೂರಿನ ಗುಂಡಿ ಗಂಡಾಂತರಕ್ಕೆ ಕೊನೆ ಬೀಳುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಮೃತ್ಯು ಸ್ವರೂಪಿ ಗುಂಡಿಗೆ ಸ್ಕೂಟರ್ ಬಿದ್ದು ಟೆಕ್ಕಿಯೊಬ್ಬ ಕೈ ಮೂಳೆ ಮುರಿದುಕೊಂಡಿದ್ದಾರೆ.
ಬೆಂಗಳೂರಿನ ಪಣತ್ತೂರು-ದಿಣ್ಣೆ ರಸ್ತೆ ಗುಂಡಿಯಿಂದಾಗಿ ಐಟಿ ಉದ್ಯೋಗಿ ಶ್ರೀಧರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶ್ರೀಧರ್ ಅವರ ಬಲ ಭುಜದ ಮೂಳೆ ಮುರಿದಿದ್ದು, ಇದರಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ.
ಶ್ರೀಧರ್ ಅವರು ಹೊರ ವರ್ತುಲ ರಸ್ತೆಯಲ್ಲಿರುವ ಬಹುರಾಷ್ಟ್ರೀಯ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನವರಿ 12ರ ಸೋಮವಾರ ಸಂಜೆ ಕಚೇರಿಯಿಂದ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಪಣತ್ತೂರು-ದಿಣ್ಣೆ ಗುಂಜೂರು ಪಾಳ್ಯ ರಸ್ತೆಯ ಸಿಡಿಪಿ ರಸ್ತೆ ಬಳಿ ಸ್ಕೂಟರ್ ಚಲಾಯಿಸುತ್ತಿದ್ದಾಗ, ದೊಡ್ಡ ಹೊಂಡವೊಂದಕ್ಕೆ ಸ್ಕೂಟರ್ ಇಳಿದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆ ಬದಿಯಲ್ಲಿದ್ದ ಮಣ್ಣು ಮತ್ತು ಕಸದ ರಾಶಿಗೆ ನುಗ್ಗಿದ್ದು, ಶ್ರೀಧರ್ ಅವರು ರಸ್ತೆಗೆ ಮೇಲೆ ಜೋರಾಗಿ ಬಿದ್ದಿದ್ದಾರೆ.
ಕೆಲ ನಿಮಿಷ ಪ್ರಜ್ಞೆ ಕಳೆದುಕೊಂಡಿದ್ದ ಅವರಿಗೆ, ದಾರಿಹೋಕರು ನೀರು ಕೊಟ್ಟು ಉಪಚರಿಸಿ ಸಹಾಯ ಮಾಡಿದ್ದಾರೆ. ಆದರೆ, ಮನೆಗೆ ತಲುಪಿದ ಮೇಲೆ ಬಲ ಭುಜದಲ್ಲಿ ವಿಪರೀತ ಊತ ಕಾಣಿಸಿಕೊಂಡಿದೆ. ವೈದ್ಯರ ಸಲಹೆಯಂತೆ ಎಕ್ಸ್-ರೇ ಮತ್ತು ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಆಘಾತಕಾರಿ ಸಂಗತಿ ತಿಳಿದುಬಂದಿದೆ.
ಅವರ ಬಲ ಭುಜದ ಮೇಲ್ಭಾಗದಲ್ಲಿ ಮೂಳೆ ಮುರಿತವಾಗಿದ್ದು,. ಇದಕ್ಕೆ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಸುಮಾರು 1.25 ರಿಂದ 1.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಶ್ರೀಧರ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಸಂಪೂರ್ಣ ಗುಣಮುಖನಾಗಲು ಕನಿಷ್ಠ ಎರಡು ತಿಂಗಳು ಬೇಕು. ಮತ್ತೆ ಗಾಡಿ ಓಡಿಸಲು ಇನ್ನೆರಡು ತಿಂಗಳು ಬೇಕಾಗಬಹುದು. ಪ್ರತಿದಿನ ಮಗಳನ್ನು ಶಾಲೆಗೆ ಬಿಡುವುದು, ಹೆಂಡತಿಗೆ ಸಹಾಯ ಮಾಡುವುದು ಎಲ್ಲವೂ ನಿಂತುಹೋಗಿದೆ. ಆಫೀಸ್ ಕೆಲಸಕ್ಕೂ ತೊಂದರೆಯಾಗಿದೆ. ಕೇವಲ ಒಂದು ಗುಂಡಿಯಿಂದ ನನ್ನ ಇಡೀ ಕುಟುಂಬ ನಾಲ್ಕು ತಿಂಗಳು ಪರದಾಡುವಂತಾಗಿದೆ ದು ನೋವು ತೋಡಿಕೊಂಡಿದ್ದಾರೆ.
ಈ ರಸ್ತೆಗಳಲ್ಲಿನ ಗುಂಡಿಗಳು ಪ್ರಾಣಕ್ಕೆ ಕುತ್ತು ತರುತ್ತಿವೆ. ಅದೃಷ್ಟವಶಾತ್ ನಾನು ಬದುಕುಳಿದಿದ್ದೇನೆ, ಆದರೆ ಎಲ್ಲರಿಗೂ ಹೀಗಾಗುವುದಿಲ್ಲ. ದಯವಿಟ್ಟು ಬಿಬಿಎಂಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪಣತ್ತೂರು ಮತ್ತು ಸಿಡಿಪಿ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಎಂದು ಮನವಿ ಮಾಡಿದ್ದಾರೆ.
ಅಪಘಾತವನ್ನು ಗಮನಿಸಿದ ಬಳಗೆರೆ, ಪಾಣತ್ತೂರು ಮತ್ತು ವರ್ತೂರು ಮುಂತಾದ ಐಟಿ ವಲಯದ ನಿವಾಸಿಗಳನ್ನು ಒಳಗೊಂಡ ಸ್ವಯಂಸೇವಾ ಸಂಘಟನೆಯಾದ ತೇಜವೀರ ಯೋಧಾಸ್, ರಸ್ತೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ಶ್ವೇತಾ ರಂಗಸ್ವಾಮಿ ನೇತೃತ್ವದ ಸಂಘಟನೆಯು ಎಲ್ಲಾ ನಿವಾಸಿಗಳು ಬಳಗೆರೆ-ವರ್ತೂರು-ಗುಂಜೂರು ರಸ್ತೆಯಲ್ಲಿ ನಾಗರಿಕರ ನೇತೃತ್ವದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆ.
ನಾಗರಿಕ ಕಾರ್ಯಕರ್ತ ಧನಂಜಯ ಪದ್ಮನಾಭಚಾರ್ ಅವರು ಮಾತನಾಡಿ, ಹದಗೆಟ್ಟ ರಸ್ತೆಯಿಂದಾಗಿ ಅಪಘಾತ ಸಂಭವಿಸಿದಲ್ಲಿ ಯಾರಾದರೂ ಪ್ರಕರಣ ದಾಖಲಿಸಬಹುದು. ಗಾಯಗೊಂಡವರು ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಬಹುದು, ರಸ್ತೆಯನ್ನು ನಿರ್ವಹಿಸುವಲ್ಲಿನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ತಿಳಿಸಿ, ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 279 (ಯಾವುದೇ ವಾಹನ ಭಾಗಿಯಾಗಿದ್ದರೆ), 338 (ಗಂಭೀರ ಗಾಯ) ಅಥವಾ 337 (ಸರಳ ಗಾಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಬಹುದು ಎಂದು ಹೇಳಿದ್ದಾರೆ.
ಪೊಲೀಸರು ಸಾಮಾನ್ಯವಾಗಿ ಪುರಸಭೆ ಅಥವಾ ಅಧಿಕಾರಿಗಳ ಹೆಸರನ್ನು ನೇರವಾಗಿ ಎಫ್‌ಐಆರ್‌ನಲ್ಲಿ ಹೆಸರಿಸಲು ಹಿಂಜರಿಯುತ್ತಾರೆ, ಆದರೆ, ದೂರನ್ನು ಮತ್ತು ರಸ್ತೆಯ ಸ್ಥಿತಿಯನ್ನು ಪರಿಶೀಲಿಸಿ ದೂರು ದಾಖಲಿಸಿಕೊಳ್ಳಬೇಕು. ರಸ್ತೆಯ ಸ್ಥಿತಿ ಅಪಾಯಕಾರಿಯಾಗಿದ್ದು, ಅದು ತಿಳಿದಿದ್ದರೆ, ದುರಸ್ತಿ ಮಾಡಲು, ಬ್ಯಾರಿಕೇಡ್ ಹಾಕಲು ಅಥವಾ ಎಚ್ಚರಿಕೆ ನೀಡಲು ವಿಫಲವಾದರೆ, ಅದು ಕ್ರಿಮಿನಲ್ ನಿರ್ಲಕ್ಷ್ಯಕ್ಕೆ ಸಮನಾಗಿದ್ದರೆ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು.
ನಿರ್ಲಕ್ಷ್ಯಕ್ಕಾಗಿ ಪುರಸಭೆಯ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿ ಮಾಡಬಹುದು ಮತ್ತು ವೈದ್ಯಕೀಯ ವೆಚ್ಚಗಳು, ಆದಾಯ ನಷ್ಟ, ನೋವು ಮತ್ತು ಯಾತನೆಗೆ ಪರಿಹಾರವನ್ನು ಪಾವತಿಸುವಂತೆ ಮಾಡಬಹುದು ಎಂದು ತಿಳಿಸಿದ್ದಾರೆ.
ಮಾರತ್ತಹಳ್ಳಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಉದಯ್ ಚೌಗ್ಲೆ ಅವರು ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಗುಂಡಿಗಳಿಲ್ಲ. ಅಪಘಾತ ಸಂಭವಿಸಿದ ರಸ್ತೆ ವೈಟ್‌ಫೀಲ್ಡ್ ವಿಭಾಗದ ಅಡಿಯಲ್ಲಿ ಬರುತ್ತದೆ, ಇದನ್ನು ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.