ಬೆಂಗಳೂರು: ರಾಜಧಾನಿ ಬೆಂಗಳೂರು ಹಲವು ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಹೊಂದಿದ್ದರೂ ಪ್ರವಾಸಿ ತಾಣವಾಗಿ ಪ್ರಚಾರ ಮಾಡಲಿಲ್ಲ. ಈಗ ಹೊಸದಾಗಿ ಪ್ರಾರಂಭಿಸಲಾದ ಅಂಬಾರಿ ಡಬಲ್ ಡೆಕ್ಕರ್ ಪ್ರವಾಸಿ ಬಸ್ ಮೂಲಕ, ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು ಬುಧವಾರ ಹೇಳಿದ್ದಾರೆ.
ಇಂದು ರವೀಂದ್ರ ಕಲಾತಕ್ಷೇತ್ರದ ಎದುರು ಬೆಂಗಳೂರಿನ ಪ್ರವಾಸಿಗರಿಗಾಗಿ ಲಂಡನ್ ಮಾದರಿಯ 'ಅಂಬಾರಿ ಡಬಲ್ ಡೆಕ್ಕರ್' ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಬೆಂಗಳೂರು ನಗರದಲ್ಲಿ ಲಂಡನ್ ಮಾದರಿಯ ಮೂರು ‘ಅಂಬಾರಿ ಡಬಲ್ ಡೆಕ್ಕರ್’ ಬಸ್ ಗಳ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದರು.
ವಿಧಾನಸೌಧವು ವಿಶ್ವದಲ್ಲಿ ವಾಸ್ತುಶಿಲ್ಪದ ವಿಶಿಷ್ಟವಾಗಿದೆ. ಆದರೆ ಇಲ್ಲಿಯವರೆಗೆ ಇದನ್ನು ಸರ್ಕಾರಿ ಕಟ್ಟಡವಾಗಿ ಮಾತ್ರ ನೋಡಲಾಗಿದೆ. ಈ ಬಸ್ ಸೇವೆಯ ಮೂಲಕ, ವಿಧಾನಸೌಧಕ್ಕೆ ಪ್ರವಾಸೋದ್ಯಮ ಅವಕಾಶವೂ ಹೆಚ್ಚಾಗುತ್ತದೆ ಎಂದರು.
ಲಂಡನ್, ಮುಂಬೈ ಮತ್ತು ಮೈಸೂರಿನಂತೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ) ಅಂಬಾರಿ ಡಬಲ್ ಡೆಕ್ಕರ್ ಬಸ್ ಅನ್ನು ಪ್ರಾರಂಭಿಸಿದೆ. ಈ ಬಸ್ ಗಳು ಸ್ಕೈವಾಕ್‌ಗಳು, ಅಂಡರ್‌ಪಾಸ್‌ಗಳು ಮತ್ತು ಫ್ಲೈಓವರ್‌ಗಳಿರುವ ಸ್ಥಳಗಳಲ್ಲಿ ಸಂಚರಿಸುವುದಿಲ್ಲ.
ಈ ಬಸ್ ಜನವರಿ 21 ರಿಂದ ರವೀಂದ್ರ ಕಲಾಕ್ಷೇತ್ರದಿಂದ ಹೊರಟು ಹಡ್ಸನ್ ವೃತ್ತ(ಕಾರ್ಪೊರೇಷನ್), ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ, ಚಿನ್ನಸ್ವಾಮಿ ಕ್ರೀಡಾಂಗಣ, ಜನರಲ್ ಪೋಸ್ಟ್ ಆಫೀಸ್, ಕರ್ನಾಟಕ ಹೈಕೋರ್ಟ್, ವಿಧಾನಸೌಧ ಮತ್ತು ಕೆ.ಆರ್. ವೃತ್ತದ ಮೂಲಕ ಹಿಂತಿರುಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಬೆಂಗಳೂರು ನಗರ ನಿಗಮವು ಈ ಹಿಂದೆ ಇದೇ ರೀತಿಯ ಬಸ್ ಸೇವೆಯನ್ನು ಪರಿಚಯಿಸಿತ್ತು, ಆದರೆ ಮೇಲೆ ತೂಗಾಡುತ್ತಿರುವ ಕೇಬಲ್‌ಗಳು ಮತ್ತು ಮರಗಳಿಂದಾಗಿ ಅದನ್ನು ನಿಲ್ಲಿಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಟಿಕೆಟ್ ಬೆಲೆ ಎಷ್ಟು? ಬುಕ್ಕಿಂಗ್ ಮಾಡುವುದು ಹೇಗೆ?
ಪ್ರವಾಸಿಗರು ಪ್ರವಾಸೋದ್ಯಮ ನಿಗಮದ ವೆಬ್‌ಸೈಟ್ ಮೂಲಕ ನಗರದ ಪ್ರವಾಸಕ್ಕೆ ಮುಂಗಡವಾಗಿ ಆನ್‌ಲೈನ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಟಿಕೆಟ್ ಬೆಲೆ 180 ರೂಪಾಯಿ ನಿಗದಿಪಡಿಸಲಾಗಿದೆ. ಬೆಳಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೆ ಈ ಬಸ್ ಸಂಚಾರ ನಡೆಸುತ್ತದೆ.