ಬೆಂಗಳೂರು: ಬಿಗ್ ಬಾಸ್ ಮುಗಿದ ಮೇಲೂ ಗಿಲ್ಲಿನಟನ ಕ್ರೇಜ್ ಕಮ್ಮಿಯಾಗಿಲ್ಲ. ಹೋದ ಕಡೆ, ಬಂದಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದು, ಗೌರವ, ಸನ್ಮಾನಗಳಲ್ಲಿ ಮಿಂದೆದಿದ್ದಾರೆ. ಈ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಕಾವೇರಿ ನಿವಾಸದಲ್ಲಿ ಇಂದು ಭೇಟಿಯಾದ ಗಿಲ್ಲಿನಟನಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದಾರೆ. ಗಂಧದ ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಗಿಲ್ಲಿ ನಟನ ಭುಜದ ಮೇಲೆ ಕೈ ಹಾಕಿ ಪೋತ್ಸಾಹಿಸಿದ್ದಾರೆ.
ಗಿಲ್ಲಿ ನಟ ತಮ್ಮ ಎಂದಿನ ಶೈಲಿಯಲ್ಲೇ ಸರಳವಾಗಿ ಶರ್ಟ್ ಧರಿಸಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಈ ವೇಳೆ ನಗರಾಭಿವೃದ್ದಿ ಖಾತೆ ಸಚಿವ ಭೈರತಿ ಸುರೇಶ್, ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್ ಕೂಡ ಉಪಸ್ಥಿತರಿದ್ದರು.
ಈ ಕುರಿತ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ, 12ನೇ ಆವೃತ್ತಿಯ ಬಿಗ್ ಬಾಸ್ ವಿಜೇತ ಗಿಲ್ಲಿ ನಟರಾಜ್ ಅವರನ್ನು ಅಭಿನಂದಿಸಿ, ಮುಂದಿನ ಜೀವನ ಇನ್ನಷ್ಟು ಯಶಸ್ಸು, ಸಂತಸದಿಂದ ಕೂಡಿರಲಿ ಎಂದು ಶುಭ ಹಾರೈಸಿದೆ ಎಂದು ಬರೆದುಕೊಂಡಿದ್ದಾರೆ.