ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಮಾಸುವ ಮುನ್ನವೇ ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ ಹಾಗೂ ಮಾಜಿ ಸಚಿವ ಬಿ ಶ್ರೀರಾಮುಲು ಮಾಲೀಕತ್ವದ ಮಾಡೆಲ್ ಹೌಸ್ ಗೆ ಶುಕ್ರವಾರ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಇಡೀ ಕಟ್ಟಡ ಧಗಧಗ ಹೊತ್ತಿ ಉರಿದಿದೆ.
ಬಳ್ಳಾರಿಯ ಕಂಟೋನ್ಮೆಂಟ್ ಬಳಿ ಇರುವ ಜನಾರ್ದನ್ ರೆಡ್ಡಿ ಒಡೆತನದ ಜಿ ಸ್ಕೈರ್ ಲೇಔಟ್ನಲ್ಲಿರುವ ಮಾಡೆಲ್ ಹೌಸ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುತ್ತಿದ್ದು, ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ಬಳ್ಳಾರಿ ಎಸ್ಪಿ ಜೊತೆ ಜನಾರ್ದನ್ ರೆಡ್ಡಿ ಚರ್ಚೆ ನಡೆಸಿದ್ದು, ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿರುವ ಬೆಂಗಳೂರಿನಲ್ಲಿರುವ ಶಾಸಕ ಜನಾರ್ದನ ರೆಡ್ಡಿ, ಅಧಿವೇಶನ ಮುಗಿಸಿ ಬಳ್ಳಾರಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಕೃತ್ಯ ಎಂದು ಆರೋಪ
ಈ ಘಟನೆ ಬಗ್ಗೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಬ್ಯಾನರ್ ಗಲಾಟೆ ವೇಳೆ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದರು. ಅಂದಿನ ಘಟನೆಗೆ ಸಾಕ್ಷಿ ಎನ್ನುವಂತೆ ಈಗ ಬೆಂಕಿ ಹಚ್ಚಿದ್ದಾರೆ. ನಮಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ. ನೂರು ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಲಾಗಿತ್ತು. ಖರೀದಿದಾರರಿಗೆ ತೋರಿಸಲು ಮಾಡೆಲ್ ಹೌಸ್ ನಿರ್ಮಿಸಿದ್ದೆವು. ಇಂದು (ಜನವರಿ 23) ಸಂಜೆ ಆರೂವರೆ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ಹಚ್ಚಿದವರನ್ನ ಹಿಡಿಯಲು ಕೆಲವರು ಯತ್ನಿಸಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತ್ರಿಯಿಸಿದ ಜನಾರ್ದನ ರೆಡ್ಡಿ, ಬ್ಯಾನರ್ ಗಲಾಟೆಯಾಗಿ ಇನ್ನೂ 15 ದಿನಗಳು ಸಹ ಆಗಿಲ್ಲ. ಆಗಲೇ ಇಂತಹ ಘಟನೆ ನಡೆದಿದೆ. ಘಟನೆ ಬಗ್ಗೆ ಬಳ್ಳಾರಿ ಎಸ್ಪಿ ಜೊತೆ ನಾನು ಮಾತಾಡಿದ್ದೇನೆ ಎಂದು ಹೇಳಿದ್ದಾರೆ.