ಬೆಂಗಳೂರು/ತುಮಕೂರು: ಗೋಣಿ ಚೀಲಗಳ ಪೂರೈಕೆಯಲ್ಲಿನ ವಿಳಂಬದಿಂದಾಗಿ ಬೆಂಬಲ ಬೆಲೆಯಡಿ ರಾಗಿ ಮತ್ತು ಜೋಳ ಖರೀದಿಗೆ ತೊಂದರೆಯಾಗಿದ್ದು, ರೈತರು ಪರದಾಡುವಂತಾಗಿದೆ. ಎರಡು ತಿಂಗಳ ಹಿಂದೆಯೇ ಬೆಳೆ ಕಟಾವು ಆಗಿದ್ದರೂ ಖರೀದಿಯಾಗದೆ ರಾಜ್ಯಾದ್ಯಂತ 2.5 ಲಕ್ಷಕ್ಕೂ ಹೆಚ್ಚು ರೈತರಿಗೆ ತೊಂದರೆಯಾಗಿದೆ. ರಾಗಿಯನ್ನು ಪ್ಯಾಕ್ ಮಾಡಲು ಗೋಣಿ ಚೀಲಗಳು ಮಾತ್ರ ಸೂಕ್ತವಾಗಿವೆ.
ಸೆಣಬಿನ ಕೊರತೆಯಿಂದಾಗಿ ಕೋಲ್ಕತ್ತಾದಲ್ಲಿ ಗೋಣಿಚೀಲಗಳ ಉತ್ಪಾದನೆಗೆ ಹೊಡೆತ ಬಿದ್ದಿದೆ. ಸೆಣಬಿನ ಉದ್ಯಮವು ಸೆಣಬು ತಂತ್ರಜ್ಞಾನ ಮಿಷನ್ ಆಫ್ ಇಂಡಿಯಾದ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತದೆ. ನೆರೆಯ ರಾಷ್ಟ್ರಗಳಿಂದ ಅದರಲ್ಲೂ ಬಾಂಗ್ಲಾದೇಶದಿಂದ ಕಡಿಮೆ ಗುಣಮಟ್ಟದ ಗೋಣಿಚೀಲಗಳ ಆಮದನ್ನು ನಿಷೇಧಿಸಿರುವುದು ಕೂಡ ಪೂರೈಕೆ ಸ್ಥಗಿತಕ್ಕೆ ಒಂದು ಅಂಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿಎಲ್) 1.5 ಕೋಟಿ ಚೀಲಗಳಿಗೆ ಇಂಡೆಂಟ್ ಹಾಕಿದೆ ಮತ್ತು ಫೆಬ್ರವರಿ ಎರಡನೇ ವಾರದಲ್ಲಿ ಮೊದಲ ರವಾನೆ ಬರುವ ನಿರೀಕ್ಷೆಯಿದೆ. ನಿಗಮದಲ್ಲಿ ಸುಮಾರು 20 ಲಕ್ಷ ಚೀಲಗಳಿವೆ. ಆದರೆ ಇದರಿಂದ ಖರೀದಿ ಆರಂಭಿಸಲು ಸಾಧ್ಯವಿಲ್ಲ. ಏಕೆಂದರೆ ಒಂದು ಬಾರಿ ಖರೀದಿ ಆರಂಭಿಸಿದ ನಂತರ ಅದನ್ನು ನಿಲ್ಲಿಸಲಾಗದು. ಏಕೆಂದರೆ ರೈತರು ಆಕ್ರೋಶಗೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು TNIE ಗೆ ತಿಳಿಸಿದರು.
ನವೆಂಬರ್‌ನಲ್ಲಿ ರಾಗಿ ಬೆಳೆಯಲ್ಲಿ ಭರ್ಜರಿ ಫಸಲು ಬಂದಿದ್ದು, ಖರೀದಿಯಲ್ಲಿ ವಿಳಂಬವಾದರೆ ರೈತರು ಶೋಷಣೆಗೆ ಗುರಿಯಾಗುತ್ತಾರೆ. ಅಲ್ಲದೇ ಅನಿವಾರ್ಯವಾಗಿ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಅನೀವಾರ್ಯತೆ ಎದುರಾಗುತ್ತದೆ. ಇದರಿಂದ ರೈತರು ಸಾಲಗಾರರಿಂದ ಸಾಲ ಪಡೆದು ಮುಂದಿನ ಬಿತ್ತನೆ ಹಂಗಾಮಿಗೆ ಸಜ್ಜಾಗಬೇಕಾಗುತ್ತದೆ ಎಂದು ತೋವಿನಕೆರೆ ಗ್ರಾಮದ ರೈತ ಎಚ್.ಜೆ.ಪದ್ಮರಾಜು ಹೇಳುತ್ತಾರೆ.
ರಾಗಿಗೆ ಕ್ವಿಂಟಲ್‌ಗೆ 4,886 ರೂ.ಗೆ ಬೆಂಬಲ ಬೆಲೆ ಲಾಭದಾಯಕವಾಗಿದ್ದು, ರೈತರು ಸರ್ಕಾರದ ಖರೀದಿಗಾಗಿ ಕಾಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ತುಮಕೂರು ಜಿಲ್ಲೆಯೊಂದರಲ್ಲೇ 56,991 ರೈತರು 12.95 ಲಕ್ಷ ಕ್ವಿಂಟಾಲ್ ಮಾರಾಟ ಮಾಡಲು ಕೆಎಫ್‌ಸಿಎಸ್‌ಸಿಎಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. 26 ಲಕ್ಷ ಗೋಣಿ ಚೀಲಗಳಿಗೆ ಇಂಡೆಂಟ್ ಹಾಕಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ತನ್ವೀರ್ ಅಲಿ ತಿಳಿಸಿದರು. ಫೆಬ್ರವರಿ ಮೊದಲ ವಾರದಲ್ಲಿ ಖರೀದಿ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯಾ ಜಿ ತಿಳಿಸಿದ್ದಾರೆ.
ರಾಗಿಗೆ 4,886 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, 60 ಲಕ್ಷ ಕ್ವಿಂಟಾಲ್ ಮಾರಾಟ ಮಾಡಲು 2.57 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ. ಜೋಳಕ್ಕೆ ರೂ 3,699 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. 15,411 ರೈತರು 8.86 ಲಕ್ಷ ಕ್ವಿಂಟಾಲ್ ಮಾರಾಟ ಮಾಡಲು ನೋಂದಾಯಿಸಿಕೊಂಡಿದ್ದಾರೆ.