ರಾಮನಗರ: ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿರುವಂತೆಯೇ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಮತ್ತೆ ಸವಾಲ್ ಹಾಕಿದ್ದಾರೆ.
ಮಾಗಡಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ. ಬಾಲಕೃಷ್ಣ, ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಚರ್ಚೆ ಮಾಡಲು ಸಿದ್ದರಿದ್ದೇವೆ. ರಾಮನಗರಕ್ಕಾದ್ರೂ ಬನ್ನಿ, ಬಿಡದಿಗಾದ್ರೂ ಬನ್ನಿ ಚರ್ಚೆಗೆ ಸಿದ್ಧ. ಈ ಯೋಜನೆ ಯಾರ ಪಾಪದ ಕೂಸು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಜನರನ್ನು ಯಾವಾಗಲೂ ಮೋಸ ಮಾಡಲು ಆಗಲ್ಲ. ನೈಸ್ ಆಗಿ ಮಾತಾಡಿಕೊಂಡು, ಒಂದೊಂದು ಬಾರಿ ಒಂದೊಂದು ಹೇಳಿಕೆ ಕೊಡೋದು ಬೇಡ. ಹಿಂದೆ ನಾನೇ ಭೂಸ್ವಾಧೀನ ಮಾಡಿದ್ದೆ ಅಂತ ಅವರೇ ಹೇಳಿದ್ದಾರೆ.
ಈಗ ಹೋಗಿ ಜನರಿಗೆ ಟೋಪಿ ಹಾಕೋ ಕೆಲಸ ಮಾಡ್ತಿದ್ದಾರೆ. ಇವತ್ತು ಈ ಕಮಿಟ್ ಮೆಂಟ್ ಇರುವವರು ಎರಡನೇ ಬಾರಿ ಸಿಎಂ ಆದಾಗಾ ಯೋಜನೆ ಯಾಕೆ ಕೈಬಿಡಲಿಲ್ಲ ಎಂದು ಪ್ರಶ್ನಿಸಿದರು.
ಜನ ಕೇಳ್ದಾಗ ನನ್ನ ಕನಸ್ಸಿನ ಯೋಜನೆ ನಾನು ಮಾಡೇ ಮಾಡ್ತೀನಿ ಅಂದ್ರಿ. ಎರಡನೇ ಬಾರಿ ಸಿಎಂ ಆದಾಗ, ಅವರದ್ದೇ ಶಾಸಕ ಇದ್ದಾಗ ನೀವು ಏನು ಮಾಡಿದ್ರಿ? ಎಂದು ಪ್ರಶ್ನಿಸಿದ ಬಾಲಕೃಷ್ಣ, ನಾವು, ನಮ್ಮ ನಾಯಕರು ಎಲ್ಲರೂ ಚರ್ಚೆಗೆ ರೆಡಿ ಇದ್ದೇವೆ ಬನ್ನಿ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದರು.