ಬೆಂಗಳೂರು: ರಾಜ್ಯಪಾಲರ ಕುರಿತು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಪದ ಬಳಕೆ ಗುರುವಾರ ಗದ್ದಲ ಏರ್ಪಟ್ಟು, ಇಡೀ ದಿನಬೇರೆ ಯಾವುದೇ ಕಾರ್ಯಕಲಾಪಗಳು ನಡೆಯದೇ ಶುಕ್ರವಾರಕ್ಕೆ ಮುಂದೂಡುವಂತಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷದ ಸದಸ್ಯರು ಸದನ ಬಾವಿಗಳಿದು ಧರಣಿ ಮುಂದುವರೆಸುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ, ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.
ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಭಾನಾಯಕರು ರಾಜ್ಯಪಾಲರ ಭಾಷಣದ ಮೇಲೆ ಖಂಡನೆ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ವಂದನಾ ನಿರ್ಣಯ ಮಂಡಿಸುತ್ತಿದೆ. ಅವರ ಖಂಡನೆ ವಿಚಾರ ಸದನಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಈ ಬಗ್ಗೆ ಸರ್ಕಾರ ದ್ವಂದ್ವ ನಿಲುವು ತಳೆದಿತ್ತು. ಇದಾದ ಬಳಿಕ ವಂದನಾ ನಿರ್ಣಯ ಎಂದು ಹೇಳಿತ್ತು. ಹಾಗಾದರೆ ಖಂಡನೆ ಮಾಡಿದ್ದಕ್ಕೆ ಸಭಾನಾಯಕರು ವಿಷಾದ ವ್ಯಕ್ತಪಡಿಸಿದರೆ ಧರಣಿ ಹಿಂಪಡೆಯುತ್ತೇವೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎನ್.ಎಸ್.ಭೋಸರಾಜ್, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ಸ್ವಾಗತಿಸಲಾಗಿದೆ ಎಂದು ತಿಳಿಸಿದರು.
ಇದರಿಂದ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಧರಣಿ ಮುಂದುವರೆಸಿದಾಗ ಮಧ್ಯಪ್ರವೇಶಿಸಿದ ಹೊರಟ್ಟಿ, “ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಸ್ವಾಗತ ಎಂದು ಸರ್ಕಾರ ಹೇಳಿದೆ ಎಂದ ಮೇಲೆ ಎಲ್ಲವೂ ಸರಿ ಆಯ್ತು ಎಂದರ್ಥ” ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಛಲವಾದಿ, “ಹೇಗೆ ಆ ರೀತಿ ಅರ್ಥ ಬರುತ್ತೆ?. ಯಾವ ಡಿಕ್ಷನರಿಯಲ್ಲಿದೆ ತೋರಿಸಿ” ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರು, ಕಲಾಪದ ಸಮಯ ಹಾಳಾಗಲು ಆಡಳಿತ ಪಕ್ಷವೇ ಕಾರಣ. ರಾಜ್ಯಪಾಲರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಬಿಜೆಪಿಯ ಅರುಣ್, ಕವಾಪ ಹಾಳಾಗಲು ನೇರವಾಗಿ ಕಾಂಗ್ರೆಸ್ ಪಕ್ಷದ ಹರಿಪ್ರಸಾದ್ ಕಾರಣ. ಅವರು ರಾಜ್ಯಪಾಲರು ಸದನದಿಂದ ಹೊರ ಹೋಗುವಾಗ ಅಡ್ಡಗಟ್ಟಿ ಕೈ ತೋರಿಸಿ ಮಾತನಾಡಿ ಅಪಮಾನ ಮಾಡಿದ್ದಾರೆಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಕೈ ತೋರಿಸದೆ ಇನ್ನೇನು ಕಾಲು ತೋರಿಸಲು ಆಗುತ್ತದೆಯೇ ಎಂದು ಹೇಳಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಅದರಿಂದ ಸಿಟ್ಟಾದ ವಿಪಕ್ಷದ ಸದಸ್ಯರು, ರಾಜ್ಯಪಾಲರಿಗೆ ಕಾಲು ತೋರಿಸುವ ಮಾತನ್ನು ಹೇಳುತ್ತಿದ್ದಾರೆ. ಇದು ಖಂಡನೀಯ. ಅವರನ್ನು ವಜಾಮಾಡಬೇಕೆಂದು ಗದ್ದಲ ಆರಂಭಿಸಿದರು.
ಹೆಣ್ಣು ಮಕ್ಕಳ ಬಗ್ಗೆ ಹಾಗೂ ಆರ್ಎಸ್ಎಸ್ ಬಗ್ಗೆ ಕೀಳು ಮಟ್ಟದ ಪದ ಪ್ರಯೋಗ ಮಾಡಿ, ಸದನದಲ್ಲಿ ಅಸಂವಿಧಾನಿಕವಾಗಿ ಮಾತನಾಡಿರುವ ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿಗೆ ಪ್ರತಿಪಕ್ಷ ದೂರು ನೀಡಿತು.
ಅತ್ಯಾಚಾರಿಗಳು, ತಲೆಹಿಡುಕರು, ಲಫಂಗರು ಎಂಬ ಪದ ಬಳಕೆ ಎಷ್ಟು ಸರಿ? ಹೀಗಾಗಿ ಹರಿಪ್ರಸಾದ್ರನ್ನು ಅಮಾನತು ಮಾಡಬೇಕೆಂದು ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದರು.
ಆದರೆ, ವಿಪಕ್ಷ ನಾಯಕ ತಲೆ ಹಿಡುಕ ಅನ್ನೋ ಪದದ ಬಗ್ಗೆ ಮಾತಾಡಲಿಲ್ಲ. ಬಳಿಕ ಹರಿಪ್ರಸಾದ್ ಮಾತಾಡಿದ್ದ ವಿವಾದದ ಪದಗಳನ್ನು ಕಡತದಿಂದ ಸಭಾಪತಿಗಳು ತೆಗೆದು ಹಾಕಿದರು.
ಈ ವೇಳೆ ಮಾತನಾಡಿದ ಸಭಾಪತಿಗಳು, ದೊಡ್ಡ ಮನಸು ಮಾಡಿ. ಸದನದಲ್ಲಿ ಇಂತಹ ಮಾತು ಆಡೋದು ಶೋಭೆ ತರೊಲ್ಲ. ನೀವು ಸಿನಿಯರ್ ಇದ್ದೀರಾ. ದೊಡ್ಡ ಮನಸು ಮಾಡಿ ವಿಷಾದ ವ್ಯಕ್ತಪಡಿಸಿ ಎಂದರು.
ಸಭಾಪತಿ ಮಾತಿಗೆ ಒಪ್ಪಿದ ಹರಿಪ್ರಸಾದ್ ಅವರು, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಇದಕ್ಕೆ ಒಪ್ಪದ ವಿಪಕ್ಷ ನಾಯಕ ಅವರ ವಿರುದ್ದ ಕ್ರಮ ಆಗಬೇಕು. ಅಮಾನತು ಆಗಬೇಕು ಎಂದು ಪಟ್ಟು ಹಿಡಿದರು.
ಹರಿಪ್ರಸಾದ್ರನ್ನು ಉದ್ದೇಶಿಸಿ ಮಾತಾಡಿದ ಬಸವರಾಜ ಹೊರಟ್ಟಿ, ನೀವು ಹಿರಿಯ ಸದಸ್ಯರಾಗಿದ್ದೀರಾ. ಇಂತಹ ಹೇಳಿಕೆ ಸದನಕ್ಕೆ ಶೋಭೆ ತರುವುದಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಿ. ಈ ಸದನಕ್ಕೆ ದೇಶದಲ್ಲಿ ಒಳ್ಳೆಯ ಹೆಸರಿದೆ. ಅದನ್ನು ಉಳಿಸಿಕೊಳ್ಳಿ ಎಂದು ಹೇಳಿ ಬೇಸರದಿಂದ ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು.