ಮಂಡ್ಯ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪತಿ, ಪತ್ನಿಯ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆಲಗೂಡು ಗ್ರಾಮದಲ್ಲಿ ಜರುಗಿದೆ.
ಕೊಲೆಯಾದ ಮಹಿಳೆಯನ್ನು ರಶ್ಮಿ ಎಂದು ಗುರುತಿಸಲಾಗಿದೆ. ಆಲಗೂಡು ಗ್ರಾಮದ ನಿವಾಸಿಯಾದ ರಮೇಶ್, ಕಳೆದ ಕೆಲವು ಸಮಯದಿಂದ ಪತ್ನಿಯ ನಡತೆಯ ಮೇಲೆ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದೇ ವಿಷಯವಾಗಿ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿಯೂ ದಂಪತಿ ನಡುವೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಕ್ರೋಶಗೊಂಡ ರಮೇಶ್ ಕಬ್ಬಿಣದ ರಾಡಿನಿಂದ ರಶ್ಮಿ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ರಶ್ಮಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ಆರೋಪಿ ರಮೇಶ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಸದ್ಯ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ಮಂಡ್ಯದ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ರಮೇಶನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.