ಬಿಎಂಟಿಸಿ ಬಸ್ ಅಪಘಾತ  
ರಾಜ್ಯ

ಬೆಂಗಳೂರು: ವಾಯು ವಜ್ರ-ಬಿಎಂಟಿಸಿ ಬಸ್ಸುಗಳ ಡಿಕ್ಕಿ, ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸುತ್ತದೆ: ಸಚಿವ ಭೈರತಿ ಸುರೇಶ್; Video

ಅನೆಕಲ್ ಕಡೆಗೆ ತೆರಳುತ್ತಿದ್ದ ವಾಯು ವಜ್ರ ಬಸ್ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ವೇಳೆ, ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಕಡೆಗೆ ತೆರಳುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ವೇಗವಾಗಿ ಬಂದು ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಬೆಂಗಳೂರು: ಇಂದು ಶನಿವಾರ ಬೆಳಗ್ಗೆ ಬೆಂಗಳೂರು ನಗರದ ಹೃದಯಭಾಗದ ಕೆ.ಆರ್. ವೃತ್ತದಲ್ಲಿ ನಿಂತಿದ್ದ ವಾಯು ವಜ್ರ ಬಸ್‌ಗೆ ಹಿಂದಿನಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ನಗರದ ಅತ್ಯಂತ ಜನನಿಬಿಡ ಜಂಕ್ಷನ್‌ಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ, ಸಂಚಾರಕ್ಕೂ ಅಡಚಣೆ ಉಂಟಾಯಿತು.

ಅಪಘಾತವು ಬೆಳಗ್ಗೆ ಸುಮಾರು 8.50 ಗಂಟೆಗೆ ಕೆ.ಆರ್. ವೃತ್ತದ ಸಮೀಪದ ಶೇಷಾದ್ರಿ ರಸ್ತೆಯಲ್ಲಿ ಸಂಭವಿಸಿದೆ. ಅನೆಕಲ್ ಕಡೆಗೆ ತೆರಳುತ್ತಿದ್ದ ವಾಯು ವಜ್ರ ಬಸ್ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ವೇಳೆ, ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಕಡೆಗೆ ತೆರಳುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ವೇಗವಾಗಿ ಬಂದು ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಹಿಂದಿನಿಂದ ಬಂದ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ವಾಯು ವಜ್ರ ಬಸ್‌ನ ಹಿಂಭಾಗವೂ ತೀವ್ರವಾಗಿ ಹಾನಿಗೊಳಗಾಗಿದೆ.

ಪೊಲೀಸರ ಪ್ರಕಾರ, ಅಪಘಾತ ಸಂಭವಿಸಿದ ವೇಳೆ ವಾಯು ವಜ್ರ ಬಸ್‌ನಲ್ಲಿ ಸುಮಾರು 20 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಹಲವರು ಗಾಯಗೊಂಡಿದ್ದು, ಹಿಂದಿನಿಂದ ಬಂದ ಬಸ್‌ನ ಚಾಲಕನಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ನ ಮುಂಭಾಗದಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಕಾಲು ವಾಹನದ ಜಖಂಗೊಂಡ ಭಾಗದಲ್ಲಿ ಸಿಲುಕಿಕೊಂಡ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಣಾ ಸಾಧನಗಳ ಸಹಾಯದಿಂದ ಬಸ್‌ನ ಮುರಿದು ಮಡಿದ ಕಬ್ಬಿಣದ ಭಾಗವನ್ನು ಕತ್ತರಿಸಿ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಅವರಿಗೆ ತಲೆಯಲ್ಲೂ ಗಾಯವಾಗಿದೆ.

ಇತರ ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.

ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಪ್ರಾಥಮಿಕ ತನಿಖೆಯ ಪ್ರಕಾರ ಮುಂಭಾಗದ ಬಸ್ ಟ್ರಾಫಿಕ್ ಸಿಗ್ನಲ್‌ಗೆ ನಿಂತಿದ್ದರೂ, ಹಿಂದಿನಿಂದ ಬಂದ ಬಸ್ ಸಮಯಕ್ಕೆ ನಿಲ್ಲಿಸಲು ಸಾಧ್ಯವಾಗದೆ ಡಿಕ್ಕಿ ಹೊಡೆದಿದೆ ಎಂದು ಹೇಳಿದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮುಂಭಾಗದ ಬಸ್ ಸಿಗ್ನಲ್ ಕಂಡು ನಿಂತಿತ್ತು. ಅದರ ಹಿಂದೆ ಬರುತ್ತಿದ್ದ ಬಸ್ ಅದಕ್ಕೆ ಡಿಕ್ಕಿ ಹೊಡೆದಿದೆ. ನಾಲ್ವರು ಗಾಯಗೊಂಡಿದ್ದಾರೆ. ಚಾಲಕನಿಗೆ ತಲೆಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯೊಬ್ಬರಿಗೆ ಕಾಲಿಗೆ ಗಂಭೀರ ಗಾಯವಾಗಿದೆ. ಯಾವುದೇ ಸಾವಿನ ವರದಿಯಾಗಿಲ್ಲ ಎಂದು ಅವರು ತಿಳಿಸಿದರು.

ಅಪಘಾತಕ್ಕೀಡಾದ ಮುಂಭಾಗದ ಕೆಎ-01-ಎಎ-4163 ನೋಂದಣಿ ಸಂಖ್ಯೆಯ ವಾಯು ವಜ್ರ ಬಸ್ ಮೆಜೆಸ್ಟಿಕ್‌ನಿಂದ ಅನೆಕಲ್ ಕಡೆಗೆ ತೆರಳುತ್ತಿತ್ತು. ಹಿಂದಿನಿಂದ ಡಿಕ್ಕಿ ಹೊಡೆದ ಕೆಎ-51-ಎಜೆ-6163 ನೋಂದಣಿ ಸಂಖ್ಯೆಯ ಬಿಎಂಟಿಸಿ ಬಸ್ ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಮಾರ್ಗದಲ್ಲಿ ಸಂಚರಿಸುತ್ತಿತ್ತು.

ಅಪಘಾತದ ಬಳಿಕ ಪೊಲೀಸರು ಹಾನಿಗೊಳಗಾದ ಎರಡೂ ಬಸ್‌ಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದರು. ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಲಾಗಿದೆ.

ಡಿಕ್ಕಿ ಹೊಡೆದ ಟಾಟಾ ಸ್ಮಾರ್ಟ್ ಮೊಬಿಲಿಟಿ ಬಸ್ ಡಿಪೋ-3ಕ್ಕೆ ಸೇರಿದ್ದು, 360ಬಿ/15 (ಮೆಜೆಸ್ಟಿಕ್–ಅತ್ತಿಬೆಲೆ) ಮಾರ್ಗದಲ್ಲಿ ಸಂಚರಿಸುತ್ತಿತ್ತು. ವಾಯು ವಜ್ರ ಬಸ್ ಡಿಪೋ-7ಕ್ಕೆ ಸೇರಿದೆ.

ಸ್ಥಳೀಯ ಬಿಎಂಟಿಸಿ ವಿಭಾಗೀಯ ನಿಯಂತ್ರಕರು ಹಾಗೂ ಟಾಟಾ ಸ್ಮಾರ್ಟ್ ಮೊಬಿಲಿಟಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ಸಮನ್ವಯ ನಡೆಸಿದರು ಎಂದು ಬಿಎಂಟಿಸಿ ತಿಳಿಸಿದೆ.

ಸಾರಿಗೆ ಸಚಿವ ಬೈರತಿ ಸುರೇಶ್, ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ ಅವರು ಸೇಂಟ್ ಮಾರ್ತಾಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪ್ರಯಾಣಿಕರು ಹಾಗೂ ಚಾಲಕರ ಆರೋಗ್ಯ ವಿಚಾರಿಸಿದರು.

ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬಿಎಂಟಿಸಿ ತಿಳಿಸಿದೆ.

ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಭೈರತಿ ಸುರೇಶ್

ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಕೆ.ಆರ್ ಸರ್ಕಲ್‌ನಲ್ಲಿ ಬೆಳಗ್ಗೆ ಎರಡು ಇವಿ ಬಿಎಂಟಿಸಿ ನಡುವೆ ಅಪಘಾತ ಸಂಭವಿಸಿದೆ. ಅವಘಡದಲ್ಲಿ 16 ಜನ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರ ದಯೆಯಿಂದ ಕೆಲವರು ಡಿಸ್ಚಾರ್ಜ್ ಆಗ್ತಿದ್ದಾರೆ. ಮೂವರಿಗೆ ಎಂಆರ್‌ಐ, ಸಿಟಿ ಸ್ಕ್ಯಾನ್ ಮಾಡಿದಾರೆ. ಒಂದು ಬಸ್ ಸಿಗ್ನಲ್‌ನಲ್ಲಿ ನಿಂತಿತ್ತು. ಈ ವೇಳೆ ಮತ್ತೊಂದು ಬಸ್ ಹಿಂದಿನಿಂದ ಬಂದು ಗುದ್ದಿದೆ. ನಮ್ಮ ಸಿಬ್ಬಂದಿ ಗಾಯಾಳುಗಳನ್ನು ಕರೆತಂದು ಅಡ್ಮಿಟ್ ಮಾಡಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸುತ್ತೇವೆ ಎಂದು ಹೇಳಿದ್ದಾರೆ.

ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಾ ಎಂದು ಎಂದು ಪರಿಶೀಲನೆ ಮಾಡ್ತೇವೆ. ಇವಿ ಬಸ್‌ಗಳ ಅಪಘಾತ ಹೆಚ್ಚಾಗುತ್ತಿವೆ. ಇದರ ಸ್ಥಿತಿಗತಿ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ...: ʻಟಾಕ್ಸಿಕ್‌ʼ ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚೂನರ್‌ ಕಾರಲ್ಲಿ ಬರುತ್ತಾನೆ ಪೌರಕಾರ್ಮಿಕ: ಸೈಕಲ್​ನಿಂದ ಐಷರಾಮಿ ಕಾರಿನವರೆಗೆ 'ಸೇಸಪ್ಪ'ರ ಯಶೋಗಾಥೆ!

ನಮ್ಮ ಹೋರಾಟ ಉದ್ಯಮಿಗಳ ವಿರುದ್ಧ ಅಲ್ಲ: CM ಡಿಕೆ ಶಿವಕುಮಾರ್ - ಗೌತಮ್ ಅದಾನಿ ಭೇಟಿ ಸಮರ್ಥಿಸಿಕೊಂಡ ಪವನ್‌ ಖೇರಾ

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?