ಕಲಬುರಗಿಯಲ್ಲಿ ಪ್ರಗತಿ ಪರಿಶೀಲನಾ ಸಭೆ 
ರಾಜ್ಯ

ಬರ ಪರಿಸ್ಥಿತಿ ನಿರ್ವಹಣೆ- ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ

ಸರ್ವರನ್ನೂ ಒಳಗೊಂಡ ಪರಿಶುದ್ಧ ಆಡಳಿತ, ಅಭಿವೃದ್ಧಿ ಮತ್ತು ಕಟ್ಟಕಡೆಯ ವ್ಯಕ್ತಿಗೂ ಅವರ ನಾಗರಿಕ ಹಕ್ಕುಗಳನ್ನು ತಲುಪಿಸುವುದು ನನ್ನ ಸರ್ಕಾರದ ಪ್ರಮುಖ ಗುರಿ. ಈ ಗುರಿ ಸಾಧಿಸಲು ಅಧಿಕಾರಿ ವರ್ಗ ಅತ್ಯಂತ ಕ್ರಿಯಾಶೀಲ, ಜನಪರ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು"

ಕಲಬುರಗಿ: ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕಲ್ಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಪ್ರಸ್ತಾವಿಕ ಭಾಷಣ ಮಾಡಿದ ಸಿಎಂ ಅವರು, ಜನಪರ ಕೆಲಸ ಮಾಡದ ಅಧಿಕಾರಿಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದರು. ಉತ್ತರ ಕರ್ನಾಟಕದ ಮೊದಲ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕಲಬುರಗಿಯಲ್ಲಿ ಆಯೋಜಿಸಲಾಗಿತ್ತು.

ಸರ್ವರನ್ನೂ ಒಳಗೊಂಡ ಪರಿಶುದ್ಧ ಆಡಳಿತ, ಅಭಿವೃದ್ಧಿ ಮತ್ತು ಕಟ್ಟಕಡೆಯ ವ್ಯಕ್ತಿಗೂ ಅವರ ನಾಗರಿಕ ಹಕ್ಕುಗಳನ್ನು ತಲುಪಿಸುವುದು ನನ್ನ ಸರ್ಕಾರದ ಪ್ರಮುಖ ಗುರಿ. ಈ ಗುರಿ ಸಾಧಿಸಲು ಅಧಿಕಾರಿ ವರ್ಗ ಅತ್ಯಂತ ಕ್ರಿಯಾಶೀಲ, ಜನಪರ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು" ಎಂದು ತಿಳಿಸಿದರು.

ನಾನು ಬಸವಾದಿ ಶರಣರ ಸಮಾನತೆಯ ತತ್ವವನ್ನು ನಂಬುವವನು. ಆದ್ದರಿಂದಲೇ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಕಲ್ಯಾಣದಿಂದ ಆರಂಭಿಸಿದ್ದೇನೆ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಒಂದೇ ವೇಗದಲ್ಲಿ ಸಾಗಬೇಕು" ಎಂದು ಹೇಳಿದರು.

ಬೀದರ್, ಕಲ್ಬುರ್ಗಿ ಜಿಲ್ಲೆಯ ಜನತೆ ನೀಡಿರುವ ಅಭೂತಪೂರ್ವ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, "ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆಯೇ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಮ್ಮನ್ನು ಈ ಸ್ಥಾನದಲ್ಲಿ ಕೂರಿಸಿರುವವ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ" ಎಂದರು.

ಆಡಳಿತದ ಅನುಭವವನ್ನು ಹಂಚಿಕೊಂಡ ಅವರು, "ನಾನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಾಗಿ ಕೆಲಸ ಆರಂಭಿಸಿ ಮುಖ್ಯಮಂತ್ರಿ ಹುದ್ದೆಯವರೆಗೆ ಎಲ್ಲಾ ಹಂತಗಳನ್ನು ದಾಟಿಕೊಂಡು ಬಂದಿದ್ದೇನೆ. ಹೀಗಾಗಿ ಆಡಳಿತದ ಪ್ರತಿಯೊಂದು ಹಂತದಲ್ಲಿ ಏನು ನಡೆಯುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ನೆಪಗಳನ್ನು ಕೇಳಲು ನಾನು ಸಿದ್ಧನಿಲ್ಲ. ನನಗೆ ಫಲಿತಾಂಶವೇ ಮುಖ್ಯ" ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದರು.

"ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿದ್ದರೆ ನಾಡಿನ ಜನತೆಯ ಋಣ ತೀರಿಸಿದಂತಾಗುತ್ತದೆ. ಆದರೆ ಜನಪರವಾಗಿ ಕೆಲಸ ಮಾಡದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದು ನನಗೆ ಅನಿವಾರ್ಯವಾಗುತ್ತದೆ" ಎಂದು ಅವರು ಎಚ್ಚರಿಕೆ ನೀಡಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಮಾತನಾಡಿದ ಮುಖ್ಯಮಂತ್ರಿಯವರು, "ಒಬ್ಬನೇ ಒಬ್ಬ ಅರ್ಹ ಮತದಾರ ತನ್ನ ಮತದಾನದ ಹಕ್ಕು ಕಳೆದುಕೊಳ್ಳಬಾರದು. ಇಲ್ಲಿ ರಾಜಕಾರಣ ಮುಖ್ಯವಲ್ಲ, ಆದರೆ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಬಿಎಲ್ಒಗಳು ಪ್ರತಿಯೊಂದು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಅರ್ಹ ಮತದಾರರ ಹೆಸರನ್ನು ಉಳಿಸುತ್ತಾರೆಯೇ ಎಂಬುದರ ಮೇಲೆ ನಿಗಾ ವಹಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ" ಎಂದು ಸೂಚಿಸಿದರು.

ರಾಜ್ಯದ ಅಭಿವೃದ್ಧಿ ಮತ್ತು ನೀರಿನ ನಿರ್ವಹಣೆ ಕುರಿತು ಮಾತನಾಡಿದ ಅವರು, "ದೇಶಾದ್ಯಂತ ಮಳೆಯ ಅಭಾವದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ರಾಜ್ಯದ ಪರಿಸ್ಥಿತಿ ಸಮಾಧಾನಕರವಾಗಿದೆ. ಅಂತರರಾಜ್ಯ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರೊಂದಿಗೆ ಐತಿಹಾಸಿಕ ಮಟ್ಟದ ಚರ್ಚೆ ನಡೆಸಿದ್ದೇವೆ.

ಕೃಷ್ಣ, ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆ ಯೋಜನೆಯನ್ನು ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದುವರಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಸಕಾರಾತ್ಮಕ ಸ್ಪಂದನೆ ನೀಡಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ರಾಜ್ಯದ ಜನರ ಹಿತಾಸಕ್ತಿ ರಕ್ಷಣೆ ಆದ್ಯತೆಯಾಗಿಸಿ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ" ಎಂದರು.

ಹಿಂದಿನ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸ್ಪಷ್ಟನೆ ನೀಡಿದ ಮುಖ್ಯಮಂತ್ರಿಯವರು, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಯಥಾವತ್ತಾಗಿ ಮುಂದುವರಿಯಲಿವೆ. ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದರ ಜೊತೆಗೆ ಆಡಳಿತದಲ್ಲಿ ಇನ್ನಷ್ಟು ಪಾರದರ್ಶಕತೆ, ಕಾರ್ಯಕ್ಷಮತೆ ಮತ್ತು ಜನಕೇಂದ್ರಿತ ದೃಷ್ಟಿಕೋನಕ್ಕೆ ಆದ್ಯತೆ ನೀಡಲಾಗುವುದು" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ: ವಯನಾಡ್ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾರಿ ಭೂ ಕುಸಿತ; ಹಲವರು ಸಿಲುಕಿರುವ ಶಂಕೆ

ಪ್ರಧಾನಿ ಮೋದಿಗೆ ಮತ್ತೊಂದು ಅಂತಾರಾಷ್ಟ್ರೀಯ ಗೌರವ; Indonesiaದ ಅತ್ಯುನ್ನತ ನಾಗರಿಕ 'Bintang Adipurna' ಪ್ರಶಸ್ತಿ ಪ್ರದಾನ..!

CM Vijay ಭೇಟಿಯನ್ನು ನಾವು ನಿಯಂತ್ರಿಸಬೇಕೆಂದು ಬಯಸುತ್ತೀರಾ?: ಡಿಎಂಕೆ ಗೆ ಸುಪ್ರೀಂ ಛೀಮಾರಿ!

ಮುಂಬೈನಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ, IMD orange ಅಲರ್ಟ್ ಹಿನ್ನೆಲೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ..!

ಶಿಷ್ಟಾಚಾರ ಬದಿಗಿಟ್ಟ ಇಂಡೋನೇಷ್ಯಾ ಅಧ್ಯಕ್ಷ: ವಿಮಾನ ನಿಲ್ದಾಣಕ್ಕೆ ಖುದ್ದು ಬಂದು ಪ್ರಧಾನಿ ಮೋದಿ ಬರಮಾಡಿಕೊಂಡ ಸುಬಿಯಾಂತೊ, ಜಕಾರ್ತಾದಲ್ಲಿ ಅದ್ಧೂರಿ ಸ್ವಾಗತ..!