ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಉದ್ಘಾಟನೆಗೆ ಶುಕ್ರವಾರ ಮುಹೂರ್ತ ನಿಗದಿ ಮಾಡಲಾಗಿದ್ದು, ನಾಡಹಬ್ಬವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರಿಸಿದೆ.
ʻನಾಡಹಬ್ಬ ದಸರಾ - 2026ʼ ಆಚರಿಸುವ ಸಂಬಂಧ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಪೂರ್ವಭಾವಿ ಸಭೆಯಲ್ಲಿ ದಸರಾ ಉದ್ಘಾಟನೆಗೆ ದಿನಾಂಕ ಫಿಕ್ಸ್ ಆಗಿದೆ.
ಜುಲೈ 26 ರಂದು ಗಜಪಯಣ ಆರಂಭವಾಗಲಿದ್ದು, ಅಕ್ಟೋಬರ್ 11ಕ್ಕೆ ದಸರಾ ಉದ್ಘಾಟನೆಗೊಳ್ಳಲಿದೆ. ಅ.21 ರಂದು ವಿಜಯದಸಮಿ ಜಂಬೂಸವಾರಿ ನಡೆಯಲಿದೆ. ಅಂದು ಸಾಯಂಕಾಲ 4:10 ರ ಮೀನಾ ಲಗ್ನದಲ್ಲಿ ಜಂಬೂಸವಾರಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಈ ದಸರಾವನ್ನು ಅದ್ಧೂರಿಯ ಜೊತೆಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ನಾಡಹಬ್ಬವನ್ನು ಆಚರಿಸಲು ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಾಡಹಬ್ಬದ ರೂಪುರೇಷೆ ಸೇರಿದಂತೆ ಗಜ ಪಯಣ, ದಸರಾ ಉದ್ಘಾಟನೆ, ಜಂಬೂ ಸವಾರಿ ಸೇರಿದಂತೆ ಈ ಬಾರಿ ದಸರಾದ ಪ್ರಮುಖ ಕಾರ್ಯಕ್ರಮಗಳ ಕುರಿತು ಸಿಎಂ ಡಿಕೆ ಶಿವಕುಮಾರ್ ಅವರು ಚರ್ಚೆ ನಡೆಸಿದರು.
ಮೈಸೂರು ದಸರಾ ಐತಿಹಾಸಿಕ ಮತ್ತು ಪಾರಂಪರಿಕ ಉತ್ಸವವಾಗಿದ್ದು, ಅದರ ಘನತೆಗೆ ಯಾವುದೇ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಅಳವಡಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ದಸರಾ ನಮ್ಮ ರಾಜ್ಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಮಹೋತ್ಸವವಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಮಾಡಿದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು,ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯ ಮತ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು.
ರಾಷ್ಟ್ರಮಟ್ಟದ ಖ್ಯಾತಿಯ ಗಾಯಕರು, ಸಂಗೀತಗಾರರು ಹಾಗೂ ಕಲಾವಿದರನ್ನು ಆಹ್ವಾನಿಸಿ ಜನರಿಗೆ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಗಿದ್ದು, ಈ ಪರಂಪರೆಯನ್ನು ಮುಂದುವರಿಸಬೇಕು ಎಂದರು.
ದಸರಾ ಕುರಿತು ಟೀಕೆ-ವಿಮರ್ಶೆಗಳು ಸಹಜ. ಅವುಗಳಿಗೆ ಅತಿಯಾದ ಮಹತ್ವ ನೀಡದೆ, ಜನರ ನಿರೀಕ್ಷೆಗೆ ತಕ್ಕಂತೆ ಅತ್ಯುತ್ತಮ ಉತ್ಸವ ಆಯೋಜಿಸುವುದರತ್ತ ಸಂಪೂರ್ಣ ಗಮನಹರಿಸಬೇಕು ಎಂದರು.
ಈ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ, ಸಚಿವರಾದ ಶ್ರೀ ಕೆ.ಜೆ ಜಾರ್ಜ್, ಶ್ರೀ ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಶ್ರೀ ಹೆಚ್.ಸಿ ಮಹದೇವಪ್ಪ, ಶ್ರೀ ಕೆ. ವೆಂಕಟೇಶ್, ಸಂಸದರಾದ ಶ್ರೀ ಯದುವೀರ್ ಒಡೆಯರ್, ಮಾಜಿ ಸಚಿವರಾದ ಶ್ರೀ ಜಿ.ಟಿ ದೇವೇಗೌಡ, ಶಾಸಕರಾದ ಶ್ರೀ ತನ್ವೀರ್ ಸೇಠ್, ಶ್ರೀ ಅನಿಲ್ ಚಿಕ್ಕಮಾದು, ರಮೇಶ್ ಬಂಡಿಸಿದ್ದೇಗೌಡ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.