ಡಿಕೆ ಶಿವಕುಮಾರ್ 
ರಾಜ್ಯ

'ಬಿಡದಿ ಟೌನ್‌ಶಿಪ್ ನಮ್ಮ ಯೋಜನೆಯಲ್ಲ'; ರಾಜಕೀಯ ಸಂಚುಗಳಿಂದ ರೈತರ ಬದುಕು ಹಾಳು ಮಾಡಲಾಗುತ್ತಿದೆ: ಸಿಎಂ ಡಿ.ಕೆ. ಶಿವಕುಮಾರ್

ನಿನ್ನೆ ಬಿಡದಿಯಲ್ಲಿ ನಡೆದ ಘಟನೆ ನನಗೆ ತುಂಬಾ ನೋವುಂಟು ಮಾಡಿದೆ. ರಾಜಕೀಯಕ್ಕಾಗಿ ಏನೆಲ್ಲಾ ನಡೆಯುತ್ತಿದೆ? ರೈತರ ಬದುಕನ್ನು ಹಾಳು ಮಾಡಲು ದೊಡ್ಡ ಸಂಚು ನಡೆಯುತ್ತಿದೆ. ಈ ಯೋಜನೆ ನನ್ನ ಕನಸಿನ ಯೋಜನೆಯಲ್ಲ..

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ತಮ್ಮ "ಕನಸಿನ ಯೋಜನೆ" ಅಲ್ಲ.. ಬಿಡದಿಯಲ್ಲಿ ನಡೆದ ಬೆಳವಣಿಗೆಗಳು ತಮ್ಮ ಮನಸ್ಸಿಗೆ ನೋವುಂಟು ಮಾಡಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ಉಂಟಾಗಿರುವ ರಾಜಕೀಯ ವಿವಾದದ ನಡುವೆಯೇ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಅವರು, 'ನಿನ್ನೆ ಬಿಡದಿಯಲ್ಲಿ ನಡೆದ ಘಟನೆ ನನಗೆ ತುಂಬಾ ನೋವುಂಟು ಮಾಡಿದೆ. ರಾಜಕೀಯಕ್ಕಾಗಿ ಏನೆಲ್ಲಾ ನಡೆಯುತ್ತಿದೆ? ರೈತರ ಬದುಕನ್ನು ಹಾಳು ಮಾಡಲು ದೊಡ್ಡ ಸಂಚು ನಡೆಯುತ್ತಿದೆ. ಈ ಯೋಜನೆ ನನ್ನ ಕನಸಿನ ಯೋಜನೆಯಲ್ಲ" ಎಂದು ಹೇಳಿದರು.

ಈ ಯೋಜನೆ ತಮ್ಮದೇ ಎಂಬಂತೆ ತಾವು ಎಂದಿಗೂ ಹೇಳಿಕೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳನ್ನು ಮಾತ್ರ ತಾವು ಮುಂದುವರಿಸುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

"ಬಿಡದಿ ಯೋಜನೆ ನನ್ನ ಕನಸಿನ ಯೋಜನೆ ಎಂದು ನಾನು ಎಂದಿಗೂ ಹೇಳಿಲ್ಲ. ರೈತರ ಮಗನೆಂದು ಕರೆಸಿಕೊಳ್ಳುವ ಎಚ್‌ಡಿಕೆ ಅವರು ಬಿಟ್ಟುಹೋದ ನಿರ್ಧಾರಗಳನ್ನು ನಾನು ಅನುಸರಿಸುತ್ತಿದ್ದೇನೆ. ಅವರು ಆರಂಭಿಸಿದ ಪ್ರಕ್ರಿಯೆಯನ್ನೇ ಮುಂದುವರಿಸುತ್ತಿದ್ದೇನೆ. ಕೃಷಿ ಮಾಡದಿದ್ದರೂ ರೈತರ ಕಷ್ಟ-ಸುಖಗಳು ಹಾಗೂ ಅವರ ಸಂಕಷ್ಟಗಳ ಬಗ್ಗೆ ತಮಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.

"ನಾನು ರೈತನ ಮಗ. ನಾನು ಸ್ವತಃ ಕೃಷಿ ಮಾಡಿಲ್ಲದಿದ್ದರೂ ರೈತರ ಅನುಭವ, ಅವರ ನೋವು ಮತ್ತು ಹೋರಾಟ ಏನು ಎಂಬುದು ನನಗೆ ಗೊತ್ತಿದೆ" ಎಂದರು. ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ತಾವು ಮುಖ್ಯಮಂತ್ರಿ ಆದ ಬಳಿಕ ಕೆಲವರಿಗೆ ನಿದ್ದೆಯೇ ಇಲ್ಲದಂತಾಗಿದೆ. ನಾನು ಮುಖ್ಯಮಂತ್ರಿ ಆದ ನಂತರ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನನ್ನನ್ನು ಜೈಲಿಗೆ ಕಳುಹಿಸಲು ಯಾವೆಲ್ಲಾ ಸಂಚುಗಳು ನಡೆದಿವೆ ಎಂಬುದನ್ನು ಇನ್ನೊಂದು ದಿನ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.

ಎಚ್.ಡಿ. ಕುಮಾರಸ್ವಾಮಿ ತಮ್ಮ ಬಗ್ಗೆ ಮಾಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಶಿವಕುಮಾರ್, "ಇಂದೂ ಎಚ್.ಡಿ. ಕುಮಾರಸ್ವಾಮಿ ಅಣ್ಣ ಅವರು ಡಿ.ಕೆ. ಶಿವಕುಮಾರ್ ಶೀಘ್ರದಲ್ಲೇ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಅವರ ಆಶಯ ಈಡೇರಲಿ ಎಂದು ನಾನು ಬಯಸುತ್ತೇನೆ. ಜೈಲು ನನಗೆ ಹೊಸದೇನಲ್ಲ" ಎಂದು ತಿರುಗೇಟು ನೀಡಿದರು.

ಅಭಿವೃದ್ಧಿ ಯೋಜನೆಗಳಿಗಾಗಿ ಭೂಸ್ವಾಧೀನ ಮಾಡಿರುವುದು ಇದೇ ಮೊದಲಲ್ಲ ಎಂದು ಹೇಳಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರು ವಿಮಾನ ನಿಲ್ದಾಣ, ಕೃಷ್ಣಾ ಯೋಜನೆ ಹಾಗೂ ಹಾಸನ ಸೇರಿದಂತೆ ಹಲವು ಯೋಜನೆಗಳಿಗೂ ಭೂಸ್ವಾಧೀನ ಮಾಡಲಾಗಿತ್ತು ಎಂದು ನೆನಪಿಸಿದರು.

"ಬೆಂಗಳೂರು ವಿಮಾನ ನಿಲ್ದಾಣ ನಿರ್ಮಾಣವಾಗುವ ಸಂದರ್ಭದಲ್ಲಿ ನಾನು ಉಸ್ತುವಾರಿ ಸಚಿವನಾಗಿದ್ದೆ. ಆಗಲೂ ಭೂಸ್ವಾಧೀನ ಮಾಡಿದ್ದೆವು. ಈಗ ಅಲ್ಲಿ ಏನು ಅಭಿವೃದ್ಧಿಯಾಗಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಬಿಡದಿ ಸೇರಿದಂತೆ ಐದು ಟೌನ್‌ಶಿಪ್‌ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೇ ಸಿದ್ಧಗೊಂಡಿತ್ತು ಎಂದು ಶಿವಕುಮಾರ್ ತಿಳಿಸಿದರು.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಬಿ.ಎಸ್. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, 2006ರ ಜೂನ್ 28ರಂದು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ಮೂಲಕ ಪಿಪಿಪಿ ಮಾದರಿಯಲ್ಲಿ ಟೌನ್‌ಶಿಪ್ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿತ್ತು ಎಂದು ಹೇಳಿದರು.

ಅಲ್ಲದೆ, 2007ರ ಜೂನ್ 11ರಂದು ಕಂದಾಯ ಸಚಿವರಾಗಿದ್ದ ಆರ್. ಅಶೋಕ್ ಅವರ ಅವಧಿಯಲ್ಲಿ ಮಂಡ್ಲಳ್ಳಿ, ವಡರಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಭೂಮಿಗೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಸರ್ಕಾರ ನಿರ್ಧಾರಗಳನ್ನು ಕೈಗೊಂಡಿತ್ತು ಎಂದು ಆರೋಪಿಸಿದರು.

2010ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಇದೇ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅನುದಾನ ಮೀಸಲಿಡಲಾಗಿತ್ತು. ಆ ಸಂದರ್ಭದಲ್ಲಿಯೂ ಆರ್. ಅಶೋಕ್ ಅವರೇ ಕಂದಾಯ ಸಚಿವರಾಗಿದ್ದರು ಎಂದು ಶಿವಕುಮಾರ್ ಹೇಳಿದರು.

ಇದೇ ವೇಳೆ, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಲವು ಖಾಸಗಿ ಜಮೀನುಗಳನ್ನು ನಿರ್ಬಂಧಿತ ವಲಯಗಳೆಂದು ಘೋಷಿಸಲಾಗಿತ್ತು. ಅಲ್ಲಿನ ರೈತರು ಹಾಗೂ ಗ್ರಾಮಸ್ಥರಿಗೆ ಪರಿಹಾರ ಮತ್ತು ಪರ್ಯಾಯ ಭೂಮಿ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಮುಖ್ಯಮಂತ್ರಿ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಳೆ ಕೊರತೆ ಸಂಕಷ್ಟದ ನಡುವೆ ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಆದೇಶ ಹೊರಡಿಸದ 'CWRC'

ಪಿಆರ್‌ಸಿ ಅಧಿಸೂಚನೆ ತಕ್ಷಣ ಹಿಂಪಡೆಯುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

'ನನ್ನನ್ನು ಜೈಲಿಗೆ ಕಳುಹಿಸೋ ಪ್ರಯತ್ನ ಮಾಡ್ತಾ ಇದ್ದೀಯಾ ಕುಮಾರಣ್ಣ, ಒಳ್ಳೆದಾಗ್ಲಿ, ನಾನು ಎಲ್ಲದಕ್ಕೂ ರೆಡಿ ಇದ್ದೇನೆ': HDK ವಿರುದ್ಧ CM ಡಿ.ಕೆ ಶಿವಕುಮಾರ್ ವಾಗ್ದಾಳಿ; Video

'ನ್ಯಾಯಯುತವಾಗಿದ್ದರೆ ಯಾವುದೇ ಮಸೂದೆಗೆ ನಮ್ಮ ವಿರೋಧವಿಲ್ಲ'; ಅಮಿತ್ ಶಾ ಭೇಟಿ ವಿವರ ಹಂಚಿಕೊಂಡ ಸುಪ್ರಿಯಾ ಸುಳೆ

'ಅಪಾರ್ಟ್ ಮೆಂಟ್ ಹಸ್ತಾಂತರ ವೇಳೆ ಅದರ ಸಂಪೂರ್ಣ ಹಕ್ಕು ಮಾಲೀಕರಿಗೆ ಸಿಗಬೇಕು; ಮಾಲೀಕತ್ವ ರಕ್ಷಣೆಗೆ ಮಸೂದೆ ಜಾರಿ': CM ಡಿ.ಕೆ ಶಿವಕುಮಾರ್; Video