ಬಳ್ಳಾರಿ: ಕರ್ನಾಟಕದ ಪುರಾತತ್ವ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಾಗಿದೆ. ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸಂಡೂರು ಅರಣ್ಯ ಪ್ರದೇಶದಲ್ಲಿರುವ ಗುಹೆಯು ಭಾರತದಲ್ಲೇ ಅತ್ಯಂತ ಹಳೆಯ ಎತ್ತರದ ಪ್ರದೇಶದ ಮಾನವ ವಾಸಸ್ಥಾನ (High-altitude habitat) ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ.
ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (PRL) ಮತ್ತು ಐಐಟಿ ಗಾಂಧಿನಗರದ ಪುರಾತತ್ವ ವಿಜ್ಞಾನ ಕೇಂದ್ರ ಜಂಟಿಯಾಗಿ ನಡೆಸಿದ ಕಾರ್ಬನ್ ಡೇಟಿಂಗ್ (Carbon-14) ಪರೀಕ್ಷೆಯ ವರದಿಯಲ್ಲಿ ಈ ಮಹತ್ವದ ವಿಷಯ ಬಹಿರಂಗವಾಗಿದೆ.
ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದಲ್ಲಿರುವ 'ರಶೀದ್ ಪಡಿ' ಗುಹೆ ಸುಮಾರು 10,000 ವರ್ಷಗಳಷ್ಟು ಹಳೆಯ ಮಾನವ ವಾಸಸ್ಥಳ ಎಂಬುದನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆ ದೃಢಪಡಿಸಿದೆ. ಈ ಮೂಲಕ ಇದು ಭಾರತದಲ್ಲೇ ಅತಿ ಎತ್ತರದಲ್ಲಿರುವ ಶಿಲಾಯುಗದ ಮಾನವ ವಾಸಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗುಹೆಯ ನೆಲಭಾಗದಿಂದ ಪತ್ತೆಯಾದ ಸೂಕ್ಷ್ಮ ಕಲ್ಲಿನ ಉಪಕರಣ (ಮೈಕ್ರೋಲಿಥ್) ಹಾಗೂ ಮಾನವ ಮೂಳೆಯ ತುಣುಕಿನ ಮೇಲ್ಮೈ ವಸ್ತುಗಳ ಮೇಲೆ ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (PRL) ಹಾಗೂ ಐಐಟಿ ಗಾಂಧಿನಗರದ ಪುರಾತತ್ವ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಾರ್ಬನ್ ಡೇಟಿಂಗ್ ನಡೆಸಲಾಯಿತು.
ಈ ಪರೀಕ್ಷೆಯ ಫಲಿತಾಂಶದಲ್ಲಿ, ಗುಹೆಯಲ್ಲಿ ಮಾನವ ವಾಸವಿದ್ದದ್ದು ಸುಮಾರು 10 ಸಾವಿರ ವರ್ಷಗಳ ಹಿಂದೆ ಎಂಬುದು ದೃಢಪಟ್ಟಿದೆ.
ಖ್ಯಾತ ಪುರಾತತ್ವ ತಜ್ಞ ಡಾ. ರವಿ ಕೊರಿಸೆಟ್ಟರ್ ಅವರ ನೇತೃತ್ವದಲ್ಲಿ ನಡೆದ ಈ ಅಧ್ಯಯನವು, ದಕ್ಷಿಣ ಭಾರತದ ಶಿಲಾಯುಗದ ಮಾನವ ಜೀವನದ ಕುರಿತ ಸಂಶೋಧನೆಗೆ ಮಹತ್ವದ ತಿರುವು ನೀಡಿದೆ.
'ರಶೀದ್ ಪಡಿ' ಎಂದು ಕರೆಯಲ್ಪಡುವ ಈ ಗುಹೆಯನ್ನು 2024ರಲ್ಲಿ ಪರಿಸರವಾದಿ ಸಮದ್ ಕೊಟ್ಟೂರು, ಬಳ್ಳಾರಿ ಹೆರಿಟೇಜ್ ಟ್ರಸ್ಟ್ ಹಾಗೂ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ಸಂಗ್ರಹಾಲಯದ ಸಹಯೋಗದೊಂದಿಗೆ ಗುರುತಿಸಲಾಗಿತ್ತು. ಇದಾದ ಬಳಿಕ ನಡೆದ ವೈಜ್ಞಾನಿಕ ಅಧ್ಯಯನಗಳೇ ಈಗ ಈ ಐತಿಹಾಸಿಕ ಮಹತ್ವವನ್ನು ದೃಢಪಡಿಸಿವೆ.
ಭೂಪದರಗಳ ಏರಿಳಿತದಿಂದ ರೂಪುಗೊಂಡ ಗುಹೆ
ಭಾರತದ ಬಹುತೇಕ ಗುಹೆಗಳು ಸುಣ್ಣದ ಕಲ್ಲಿನಿಂದ (ಲೈಮ್‌ಸ್ಟೋನ್) ರೂಪುಗೊಂಡಿದ್ದರೆ, ಸಂಡೂರಿನ ಈ ಗುಹೆಗಳು ಭೂಪದರಗಳ ಟೆಕ್ಟೋನಿಕ್ ಏರಿಳಿತದಿಂದ ನಿರ್ಮಾಣವಾಗಿರುವುದು ಮತ್ತೊಂದು ವಿಶೇಷತೆ. ಇದು ಭೂವೈಜ್ಞಾನಿಕ ಅಧ್ಯಯನಕ್ಕೂ ಹೊಸ ಆಯಾಮ ನೀಡುತ್ತಿದೆ.
ಭಾರತದಲ್ಲಿ ಇಂಥ ಸ್ಥಳ ಮತ್ತೊಂದಿಲ್ಲ
ಡಾ. ರವಿ ಕೊರಿಸೆಟ್ಟರ್ ಅವರ ಪ್ರಕಾರ, 850 ಮೀಟರ್ ಎತ್ತರದಲ್ಲಿ, ದಟ್ಟ ಅರಣ್ಯದ ನಡುವೆ ಶಿಲಾಯುಗದ ಮಾನವರು ನೆಲೆಸಿದ್ದಕ್ಕೆ ದೊರೆತಿರುವ ಸಾಕ್ಷ್ಯ ಭಾರತದಲ್ಲಿ ಇದೇ ಮೊದಲು.
ಸುಮಾರು 100 ಅಡಿ ಎತ್ತರ ಮತ್ತು 45 ಅಡಿ ನೆಲವಿಸ್ತೀರ್ಣ ಹೊಂದಿರುವ ಈ ಗುಹೆಯಲ್ಲಿ ಕಲ್ಲಿನ ಆಯುಧಗಳು, ಪ್ರಾಣಿಗಳ ಮೂಳೆಗಳು ಹಾಗೂ ಹಲವು ಪುರಾತತ್ವ ಅವಶೇಷಗಳು ಪತ್ತೆಯಾಗಿವೆ. ಇವುಗಳು ಅಲ್ಲಿ ಮಾನವರು ದೀರ್ಘಕಾಲ ವಾಸವಿದ್ದುದಕ್ಕೆ ಬಲವಾದ ಸಾಕ್ಷ್ಯಗಳಾಗಿವೆ.
ಇನ್ನಷ್ಟು ಸಂಶೋಧನೆಗೆ ದಾರಿ
ಗುಹೆಯಲ್ಲಿ ಪತ್ತೆಯಾದ ಕೆಲವು ಕಲ್ಲಿನ ಉಪಕರಣಗಳು "ಮಧ್ಯ ಶಿಲಾಯುಗ (Mesolithic Period)"ಕ್ಕೆ ಸೇರಿವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಇದಲ್ಲದೆ, ಸಾಕು ಹಾಗೂ ಕಾಡು ಪ್ರಾಣಿಗಳ ಮೂಳೆ ಮತ್ತು ಹಲ್ಲುಗಳ ಅವಶೇಷಗಳೂ ದೊರೆತಿದ್ದು, ಇವುಗಳ ಮೇಲೂ ಕಾರ್ಬನ್ ಡೇಟಿಂಗ್ ನಡೆಸಲಾಗುತ್ತಿದೆ.
ಈ ಅಧ್ಯಯನಗಳು ಪೂರ್ಣಗೊಂಡರೆ, ಆ ಕಾಲದ ಮಾನವರ ಜೀವನಶೈಲಿ, ಆಹಾರ ಪದ್ಧತಿ, ಬೇಟೆಯ ವಿಧಾನ ಮತ್ತು ಪರಿಸರದ ಕುರಿತು ಇನ್ನಷ್ಟು ಸ್ಪಷ್ಟ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
ಆದಿಮಾನವನ ರಹಸ್ಯ ಸಿಕ್ಕಿತು ಉತ್ತರ
2024ರಲ್ಲಿ ಈ ಗುಹೆ ಪತ್ತೆಯಾದ ಬಳಿಕ, ಆದಿಮಾನವ ಈ ಪ್ರದೇಶಕ್ಕೆ ಯಾವಾಗ ಬಂದ? ಏಕೆ ಬಂದ? ಎಂಬ ಪ್ರಶ್ನೆಗಳು ಸಂಶೋಧಕರನ್ನು ಕಾಡುತ್ತಿದ್ದವು.
ಸಸ್ಯಾಹಾರ, ಬೇಟೆಗಾಗಿ ಪ್ರಾಣಿಗಳು, ಕಲ್ಲಿನ ಆಯುಧ ತಯಾರಿಸಲು ಸೂಕ್ತ ಬಂಡೆಗಳು ಮತ್ತು ಸುರಕ್ಷಿತ ಆಶ್ರಯದ ಹುಡುಕಾಟದಲ್ಲೇ ಮಾನವರು ಈ ಪ್ರದೇಶದಲ್ಲಿ ನೆಲೆಸಿದ್ದರು ಎಂಬುದಕ್ಕೆ ಈಗ ಕಾರ್ಬನ್ ಡೇಟಿಂಗ್ ಬಲವಾದ ಸಾಕ್ಷ್ಯ ಒದಗಿಸಿದೆ.
ಕರ್ನಾಟಕದ ಹೆಗ್ಗಳಿಕೆಗೆ ಮತ್ತೊಂದು ಗರಿ
ಹಂಪಿ, ಸಂಗನಕಲ್ಲು, ಹಿರೇಬೆಣಕಲ್ ಮೊದಲಾದ ಐತಿಹಾಸಿಕ ತಾಣಗಳ ಸಾಲಿಗೆ ಈಗ ಸಂಡೂರಿನ 'ರಶೀದ್ ಪಡಿ' ಗುಹೆಯೂ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಇದು ಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ಭಾರತದ ಪ್ರಾಗೈತಿಹಾಸಿಕ ಇತಿಹಾಸ ಅಧ್ಯಯನಕ್ಕೂ ಅತ್ಯಂತ ಮಹತ್ವದ ಸಂಶೋಧನಾ ತಾಣವಾಗಿ ರೂಪುಗೊಳ್ಳುವ ಎಲ್ಲ ಲಕ್ಷಣಗಳನ್ನು ಹೊಂದಿದೆ.