ಕೇಂದ್ರ ಸಚಿವ ವಿ. ಸೋಮಣ್ಣ 
ರಾಜ್ಯ

ತುಮಕೂರಿನ ಶಿರಾದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಕೇಂದ್ರ ವಿಮಾನಯಾನ ಸಚಿವರಿಗೆ ಸಚಿವ ವಿ. ಸೋಮಣ್ಣ ಪತ್ರ!

ತುಮಕೂರಿನ ಶಿರಾ ಬಳಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯ ಕರ್ನಾಟಕ ಭಾಗ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ ಎಂದು ವಿ. ಸೋಮಣ್ಣ ತಿಳಿಸಿದ್ದಾರೆ.

ಬೆಂಗಳೂರು: ತುಮಕೂರಿನ ಶಿರಾದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಕೇಂದ್ರ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯ ಶಿರಾ ಬಳಿ ನಿರ್ಮಿಸಬೇಕೆಂಬುದು ರಾಜ್ಯದ ಬಹುತೇಕ ಜನಪ್ರತಿನಿಧಿಗಳ ಒತ್ತಾಯವಾಗಿದೆ. ಶಿರಾದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪ್ರಗತಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಕಳೆದ ವರ್ಷದ ಮಾರ್ಚ್ 20 ರಂದು ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಹಾಗೂ ರಾಯಚೂರು ಸೇರಿದಂತೆ ಪ್ರಮುಖ ಜಿಲ್ಲೆಗಳ ಶಾಸಕರು ನನಗೆ ಪತ್ರ ಬರೆದು ಒತ್ತಾಯಿಸಿದ್ದರು. ಆ ಭಾಗವಾಗಿಯೇ ಅದೇ ವರ್ಷದ ಏಪ್ರಿಲ್ 22ರಂದು ಕೇಂದ್ರದ ನಾಗರಿಕ ವಿಮಾನಯಾನ ಸಚಿವರಾದ ಕೆ. ರಾಮಮೋಹನ ನಾಯ್ಡು ಅವರಿಗೆ ಪತ್ರ ಬರೆದು ಈ ಭಾಗದ ಜನಪ್ರತಿನಿಧಿಗಳ ಒತ್ತಾಸೆಯನ್ನು ಅವರ ಗಮನಕ್ಕೆ ತಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ಕರ್ನಾಟಕ ರಾಜ್ಯವು ಬೆಂಗಳೂರು ಕೇಂದ್ರಿತವಾಗಿ ಅಭಿವೃದ್ಧಿ ಸಾಧಿಸಿದೆ. ಬೆಂಗಳೂರಿಗೆ ಪರ್ಯಾಯವಾಗಿ ರಾಜ್ಯದ ಎಲ್ಲಾ ಭಾಗಗಳನ್ನು, ನಗರಗಳನ್ನು ಸಶಕ್ತವಾಗಿ ಬೆಳೆಸುವುದು ಜನಪ್ರತಿನಿಧಿಗಳೆಲ್ಲರ ಜವಾಬ್ದಾರಿಯೂ ಹೌದು. ಆ ಹಿನ್ನೆಲೆಯಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಬೆಂಗಳೂರಿನ ಸಮೀಪ ನಿರ್ಮಿಸಿದರೆ, ಉತ್ತರ ಮತ್ತು ಮಧ್ಯ ಕರ್ನಾಟಕದ ಅಭಿವೃದ್ಧಿಗೆ ನ್ಯಾಯ ಸಂದಂತೆ ಆಗುವುದಿಲ್ಲ ಎಂದಿದ್ದಾರೆ.

ತುಮಕೂರಿನ ಶಿರಾ ಬಳಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯ ಕರ್ನಾಟಕ ಭಾಗ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ. ಶಿರಾದ ಸುತ್ತುಮುತ್ತ ಮುಂಬೈ–ಬೆಂಗಳೂರು ಕೈಗಾರಿಕಾ ಕಾರಿಡಾರ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (NIMZ), ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್ ಹಾಗೂ KIADB ಕೈಗಾರಿಕಾ ಪ್ರದೇಶಗಳಿವೆ. NH-48, NH-69, NH-544E ಸೇರಿದಂತೆ ಹಲವು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಹಾಗೂ ಹೊಸ ರೈಲು ಮಾರ್ಗಗಳ ಸಾರಿಗೆ ಸಂಪರ್ಕ ಜಾಲವೂ ಬಲವಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಪ್ರಮಾಣದ ಸರ್ಕಾರಿ ಭೂಮಿ ಲಭ್ಯವಿದ್ದು, ಭದ್ರಾ ಮೇಲ್ದಂಡೆ ಕಾಲುವೆ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ನೀರಿನ ಲಭ್ಯತೆಯ ಜೊತೆಗೆ ಚಿತ್ರದುರ್ಗದ DRDO, IISc ಕ್ಯಾಂಪಸ್ ಹಾಗೂ ತುಮಕೂರಿನ ಗುಬ್ಬಿಯ HAL ಹೆಲಿಕಾಪ್ಟರ್ ಘಟಕಗಳೂ ಅತ್ಯಂತ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಿರಾದ ಈ ಸ್ಥಳವು DGCA ಯ ನಿಯಮಕ್ಕನುಗುಣವಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 150 ಕಿ.ಮೀ ದೂರವಿದೆ. ಅಲ್ಲದೇ, ಇದರಿಂದಾಗಿ ಮಧ್ಯ ಮತ್ತು ಉತ್ತರ ಕರ್ನಾಟಕದ ಜನರಿಗೆ ಅಂತಾರಾಷ್ಟ್ರೀಯ ಪ್ರಯಾಣ ಹಾಗೂ ಸರಕು ಸಾಗಣೆಗೆ ಅನುಕೂಲವಾಗಲಿದೆ. ಕೈಗಾರಿಕೆ, ಉದ್ಯೋಗ, ಹೂಡಿಕೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರಕಲಿದ್ದು, ರಾಜ್ಯದ ಸಮತೋಲಿತ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಚಿವರು ಮನವರಿಕೆ ಮಾಡಿಕೊಟ್ಟಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿಯ ಹಿತದೃಷ್ಠಿಯಿಂದ ತುಮಕೂರಿನ ಶಿರಾ ಭಾಗದಲ್ಲಿಯೇ ನೂತನ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೇಂದ್ರ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದೇನೆ. ರಾಜ್ಯ ಸರ್ಕಾರವು ರಾಜ್ಯದ ಸಮಗ್ರ ಅಭಿವೃದ್ಧಿಯನ್ನೇ ಮಾನದಂಡವನ್ನಾಗಿ ಇಟ್ಟುಕೊಂಡು ಚಿಂತನೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ನಿರ್ಮಿಸಿದ ಭಾರತ: ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ 'ವಿಕ್ರಮ್-1' ಯಶಸ್ವಿ ಉಡಾವಣೆ, ವಿಜ್ಞಾನಿಗಳ ಸಂಭ್ರಮ

ವಾಂಗ್‌ಚುಕ್ ಸ್ಥಳಾಂತರ ಬೆನ್ನಲ್ಲೇ ಅಭಿಜೀತ್ ದೀಪ್ಕೆ ಮುಖಕ್ಕೆ ಇಂಕ್ ಎಸೆದ ಮಹಿಳೆ; ಹೊಸ ಹೈಡ್ರಾಮಕ್ಕೆ ಜಂತರ್ ಮಂತರ್‌ ಸಾಕ್ಷಿ

ಲವ್ ಜಿಹಾದ್ ಗೆ ಪ್ರೋತ್ಸಾಹ: ಆಮಿರ್ ಖಾನ್ ಗೆ ಶೀಘ್ರದಲ್ಲೇ ತಕ್ಕ ಶಾಸ್ತಿ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಜೀವ ಬೆದರಿಕೆ!

ನವದೆಹಲಿ: ಜಂತರ್ ಮಂತರ್ ನಲ್ಲಿ ಭಾರಿ ಹೈಡ್ರಾಮ; ಬಲವಂತದಿಂದ ಸೋನಮ್ ವಾಂಗ್‌ಚುಕ್ ಆಸ್ಪತ್ರೆಗೆ ಸ್ಥಳಾಂತರ! Video

ಭೀಕರ ಅಪಘಾತ: ಇ-ರಿಕ್ಷಾಗೆ ಹೇರಲಾಗಿದ್ದ ಕಬ್ಬಿಣದ ಸರಳುಗಳು ಚುಚ್ಚಿ ಕ್ಯಾಬ್ ಚಾಲಕ ದಾರುಣ ಸಾವು! Video