ಬೆಂಗಳೂರು: ಶಾಶ್ವತ ನಿವಾಸಿ ಪ್ರಮಾಣಪತ್ರ (PCR) ವಿತರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಮರ್ಥಿಸಿಕೊಂಡಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೈಜ ನಿವಾಸಿಗಳಿಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದ್ದಾರೆ.
ಇಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ವೇಳೆ ಹಳೆಯ ಮತದಾರರ ಪಟ್ಟಿಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದವರಿಗೆ ಪಿಆರ್‌ಸಿ ಸಹಕಾರಿಯಾಗಲಿದೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬದ್ಧವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಜನಿಸಿರುವ ಆಧಾರದ ಮೇಲೆ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ನೀಡಲು ಸರ್ಕಾರ ತೀರ್ಮಾನಿಸಿದೆ. ಹೆಚ್ಚಿನ ಜನರಿಂದ 2002ರ ಮತದಾರರ ಪಟ್ಟಿಯ ವಿವರಗಳನ್ನು ಕೇಳಲಾಗಿದೆ. ಸುಮಾರು 50ರಿಂದ 60 ಶೇಕಡಾ ಜನರ ಬಳಿ ಆ ದಾಖಲೆಗಳು ಇರಬಹುದು. ಆದರೆ ಕೆಲವರ ಬಳಿ ಅವು ಇಲ್ಲದಿರಬಹುದು. ಅಂತಹವರಿಗೆ ಪಿಆರ್‌ಸಿ ಉಪಯೋಗವಾಗಲಿದೆ ಎಂದು ಹೇಳಿದರು.
ಈ ಹಿಂದೆಯೂ ತಹಶೀಲ್ದಾರರು ಜಾತಿ ಪ್ರಮಾಣಪತ್ರಗಳನ್ನು ನೀಡುತ್ತಿದ್ದರು ಎಂದು ಹೇಳಿದ ಪರಮೇಶ್ವರ್, ಈಗ ಸರ್ಕಾರ ಕೈಗೊಂಡಿರುವ ಕ್ರಮವನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಈ ಪ್ರಕ್ರಿಯೆಗೆ ಔಪಚಾರಿಕ ರೂಪ ನೀಡಬೇಕಾಗಿದೆ. ಅರ್ಜಿದಾರರು 10 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವುದಕ್ಕೆ ಪುರಾವೆ ನೀಡಿದರೆ ಅವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ನಾವು ನಮ್ಮ ಹೆಣ್ಣುಮಕ್ಕಳನ್ನು ಬಾಂಗ್ಲಾದೇಶದವರಿಗೆ ಮದುವೆ ಮಾಡಿಕೊಡುತ್ತೇವೆಯೇ? ಇಲ್ಲ. ನಾವು ಕೇಂದ್ರ ಸರ್ಕಾರದ ವಿರುದ್ಧ ಏನನ್ನೂ ಮಾಡುತ್ತಿಲ್ಲ. ಯಾವುದೇ ಕಾನೂನನ್ನೂ ಉಲ್ಲಂಘಿಸುತ್ತಿಲ್ಲ. ಕಾನೂನಿನ ಪ್ರಕಾರವೇ ಎಲ್ಲವೂ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ರೈತರು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳಬೇಕು. ಉದ್ಯೋಗದ ಕೊರತೆಯಿಂದ ವಲಸೆ ಹೋಗಬೇಕಾಗಿರುವವರ ಹಿತವನ್ನೂ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬರ ನಿರ್ವಹಣೆ ಕುರಿತು ಬಿಜೆಪಿ ಮಾಡುತ್ತಿರುವ ಟೀಕೆಯನ್ನು ತಳ್ಳಿಹಾಕಿದ ಪರಮೇಶ್ವರ್, ಪ್ರತಿ ಜಿಲ್ಲೆಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 5 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ (PD) ಖಾತೆಗಳಲ್ಲಿ 329 ಕೋಟಿ ಲಭ್ಯವಿದ್ದು, ಪ್ರತಿ ತಾಲ್ಲೂಕಿಗೆ 1 ಕೋಟಿ ಅನುದಾನ ಘೋಷಿಸಲಾಗಿದೆ ಎಂದು ಹೇಳಿದರು.
ಈ ಎಲ್ಲ ಕ್ರಮಗಳನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಂಡು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಅವರು ತಿರುಗೇಟು ನೀಡಿದರು.
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಮನೆ ಬಾಗಿಲಿಗೆ ಪಿಆರ್‌ಸಿ ತಲುಪಿಸುವ ಯೋಜನೆ ಘೋಷಿಸಿದ್ದರು.
ಜನರ ವಾಸಿಸುವ ಮತ್ತು ಮತ ಚಲಾಯಿಸುವ ಹಕ್ಕನ್ನು ರಕ್ಷಿಸಲು ಇಂತಹ ಕ್ರಮ ಕೈಗೊಂಡಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಅವರು ಹೇಳಿದ್ದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಈ ಕ್ರಮವು ಸಾಂವಿಧಾನಿಕ ಮಿತಿಯನ್ನು ಮೀರುವಂತದ್ದು ಎಂದು ಆರೋಪಿಸಿದ್ದು, ಇದರ ಗಂಭೀರ ಪರಿಣಾಮಗಳು ಉಂಟಾಗಬಹುದು ಎಂದು ಎಚ್ಚರಿಸಿದೆ.