ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಯುವಕರು, ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಬೇಕೆಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, 2047ರ ಹೊತ್ತಿಗೆ ವಿಕಸಿತ ಭಾರತ, ಅಮೃತ ಕಾಲ ಮಾಡಬೇಕೆಂದು ಕನಸು ಕಾಣುತ್ತಿದ್ದೀರಿ, ದೇಶದ ಯುವಜನತೆಯನ್ನು ದೂರವಿಟ್ಟು ಮಾಡಲು ಸಾಧ್ಯವಿಲ್ಲ. ಅವರ ಹಿತಾಸಕ್ತಿ ಬಗ್ಗೆ ಕಾಳಜಿ ವಹಿಸಬೇಕು, ನಿಮ್ಮ ರಕ್ಷಣೆಗೆ ನಾವು ನಿಲ್ಲುತ್ತೇವೆ ಮೋದಿಯವರೇ, ಯಾಕೆ ಹೆದರುತ್ತೀರಿ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಿರಿ ಎಂದರು.
56 ಇಂಚಿನ ಎದೆ, ಪಾಕಿಸ್ತಾನಕ್ಕೆ ಪ್ರೀತಿ ತೋರಿಸುತ್ತೇನೆ ಎಂದು ಹೇಳಿಕೊಂಡು ಓಡಾಡುವ ಮೋದಿಯವರು ಮೊದಲು ನಿಮ್ಮ ಜನರಿಗೆ ಪ್ರೀತಿ, ಶಾಂತಿಯನ್ನು ತೋರಿಸಿ ಎಂದು ತಿರುಗೇಟು ನೀಡಿದರು.
ನನ್ನನ್ನು ಪ್ರತಿದಿನ 'ಟ್ರೋಲ್ ಮಿನಿಸ್ಟರ್' ಎನ್ನುತ್ತಾರೆ. ಆದರೆ ಸ್ವತಃ ಪ್ರಧಾನ ಮಂತ್ರಿಯವರೇ ದೇಶದಲ್ಲಿ ದೊಡ್ಡ ಮಟ್ಟದ ಟ್ರೋಲ್ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ 52 ಬಾರಿ ಪೇಪರ್ ಲೀಕ್ ಆಗಿವೆ. 'ಮೇಕ್ ಇನ್ ಇಂಡಿಯಾ', 'ಡಿಜಿಟಲ್ ಇಂಡಿಯಾ', 'ಸ್ಮಾರ್ಟ್ ಸಿಟಿ' ಎಲ್ಲವೂ ವಿಫಲವಾಗಿವೆ. ಸಾಧನೆ ಶೂನ್ಯವಾಗಿರುವಾಗ ಯಾವುದರ ಬಗ್ಗೆ ರೀಲ್ಸ್ ಮಾಡಬೇಕು?" ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. 100 ಸ್ಮಾರ್ಟ್ ಸಿಟಿ ಮಾಡುತ್ತೇನೆಂದು ಹೇಳಿದವರು ಒಂದೂ ಮಾಡಿಲ್ಲ, ದೇಶದ ಸಾಧನೆಯನ್ನು ತೋರಿಸಲಿ ಎಂದರು.
ವಿರೋಧ ಪಕ್ಷಗಳ ನಾಯಕರನ್ನು ‘ಆಂಟಿ ನ್ಯಾಷನಲ್’ ಎಂದು ಕರೆಯಲು ಬಿಜೆಪಿಗರಿಗೆ ಯಾರು ಗುತ್ತಿಗೆ ಕೊಟ್ಟಿದ್ದಾರೆ? ಆರ್‌ಎಸ್‌ಎಸ್ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಲು 52 ವರ್ಷಗಳು ಬೇಕಾಯಿತು. ಇವರಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸುವವರು ದೇಶಭಕ್ತರಾದರೆ, ಗಾಂಧೀಜಿ ಯಾರು? ಅವರ ಕಚೇರಿಗಳಲ್ಲಿ ಯಾರ ಫೋಟೋಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಒಂದೇ ಒಂದು ಭಾಗಿಯಾಗದವರು ನಮಗೆ ರಾಷ್ಟ್ರಭಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್‌ನಲ್ಲಿಯೂ ವಿದ್ಯಾರ್ಥಿಗಳು ನೀಟ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಗೃಹ ಇಲಾಖೆಯಿಂದ ಪ್ರತಿಭಟನಾಕಾರರಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಯಾವುದೇ ದಬ್ಬಾಳಿಕೆ ಅಥವಾ ದೌರ್ಜನ್ಯವಿಲ್ಲದೆ ಅತ್ಯಂತ ಶಿಸ್ತಿನಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ಮೋದಿ ಅವರಿಗೆ ಬೆಂಗಳೂರಿನ ಪ್ರತಿಭಟನೆಯ ರೀಲ್ಸ್ ಕಳುಹಿಸಿಕೊಡಿ. ಗೃಹ ಇಲಾಖೆಯನ್ನು ದೌರ್ಜನ್ಯವಿಲ್ಲದೆ ಹೇಗೆ ಸುಸೂತ್ರವಾಗಿ ನಡೆಸಬೇಕೆಂದು ಅಮಿತ್ ಶಾ ಅವರು ಕರ್ನಾಟಕವನ್ನು ನೋಡಿ ಕಲಿಯಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟಾಂಗ್ ನೀಡಿದರು.
ಅಕ್ಕಿ ಕಳ್ಳತನದಲ್ಲಿ ಬಿಜೆಪಿ ನಾಯಕರಿದ್ದಾರೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಕದ್ದು ಫ್ರಾನ್ಸ್, ಯುಎಇ, ಕತಾರ್ ದೇಶಗಳಿಗೆ ಅಕ್ರಮವಾಗಿ ಸಾಗಿಸುತ್ತಿರುವ ಜಾಲದ ಹಿಂದೆ ಬಿಜೆಪಿ ನಾಯಕರೇ ಇದ್ದಾರೆ ಎಂದು ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಆರೋಪಿಸಿರು. "ಅಕ್ಕಿ ಕಳ್ಳತನ ಮಾಡುವವರಿಗೆ ಬಿಜೆಪಿ ಟಿಕೆಟ್ ನೀಡುತ್ತದೆ. ಈ ಪ್ರಕರಣಗಳಲ್ಲಿ ಬಿಜೆಪಿ ನಾಯಕರೇ A1, A2, A3 ಆರೋಪಿಗಳಾಗಿದ್ದು, ಚಾರ್ಜ್‌ಶೀಟ್ ಕೂಡ ಆಗಿದೆ ಎಂದರು.