

ಬೆಂಗಳೂರು: ಕರೆ ಮಾಡಿದಾಗ ಪತ್ನಿ ರಿಸೀವ್ ಮಾಡಲಿಲ್ಲ ಎಂಬ ಕಾರಣಕ್ಕೆ ಗಂಡನೇ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನ ಮೈಕೋ ಲೇಔಟ್‌ನ ಬಿಳೇಕಹಳ್ಳಿಯಲ್ಲಿ ನಡೆದಿದೆ.
ಗುಂಜಾ ಮದೇಷಿಯಾ (38) ಕೊಲೆಯಾದ ಮಹಿಳೆ. ಆಕೆಯ ಪತಿ ರಂಜಿತ್ ಕುಮಾರ್ ಗುಪ್ತಾ ಬಂಧಿತ ಆರೋಪಿ. ದಂಪತಿಗೆ ಇಬ್ಬರು ಮಕ್ಕಳಿದ್ದು, ಮೈಕೋ ಲೇಔಟ್‌ನ ಬಿಳೇಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗಂಡ- ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಿನ್ನೆ ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ಮತ್ತೆ ಗಲಾಟೆ ಶುರುವಾಗಿದೆ. ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಪತಿರಾಯ, ಕುದಿಯೋ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾನೆ. ಇದರಿಂದ ಶವ ವಿರೂಪವಾಗಿ ಆಕಸ್ಮಿಕ ಘಟನೆ ಎಂದು ಬಿಂಬಿಸಲು ಹೋಗಿದ್ದಾನೆ. ಆದರೆ, ಇವರ ಜಗಳವನ್ನು ನೋಡಿದ್ದ ನೆರೆಹೊರೆಯವರು ಮಹಿಳೆ ಕಾಣದಿದ್ದಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅಲ್ಲದೇ ರಂಜಿತ್ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಮೈಕೋ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ ಕೋಪಕ್ಕೆ ಇತ್ತ ಅಪ್ಪನೂ ಇಲ್ಲದೇ ಅಮ್ಮನೂ ಇಲ್ಲದೆ ಮಕ್ಕಳು ಮಾತ್ರ ಬಡವಾಗಿವೆ.