ಎಐ ಸೃಷ್ಟಿತ ಚಿತ್ರ 
ರಾಜ್ಯ

ನಮ್ಮ ಮೆಟ್ರೋ 'Blue Line' ಕಾಮಗಾರಿ ಚುರುಕು: ಅಕ್ಟೋಬರ್‌ನಲ್ಲಿ ಪ್ರಾಯೋಗಿಕ ಸಂಚಾರ, 2027 ಕ್ಕೆ ಪೂರ್ಣ ಪ್ರಮಾಣದ ಕಾರ್ಯಾಚರಣೆ..?

ಹೊರವರ್ತುಲ ರಸ್ತೆಯ 17 ಕಿ.ಮೀ. ವ್ಯಾಪ್ತಿಯ ಮರುಅಭಿವೃದ್ಧಿಗೆ ಸರ್ಕಾರ ರೂ.450 ಕೋಟಿ ಮೀಸಲಿಟ್ಟಿದ್ದು, ಈ ಯೋಜನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆಗೆ ಪ್ರಮುಖ ಪರಿಹಾರ ಒದಗಿಸಬಲ್ಲ ನಮ್ಮ ಮೆಟ್ರೋದ 'ಬ್ಲೂ ಲೈನ್' (Blue Line) ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.

ಮುಂಬರುವ ಅಕ್ಟೋಬರ್ ತಿಂಗಳಿನಲ್ಲೇ ಈ ಮಾರ್ಗದ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿ, 2027 ರೊಳಗೆ ವಾಣಿಜ್ಯ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವಂತೆ ಗಡುವು ವಿಧಿಸಿದ್ದಾರೆ.

17 ಕಿ.ಮೀ. ಉದ್ದದ ಹೊರವರ್ತುಲ ರಸ್ತೆ (ಒಆರ್‌ಆರ್) ಅಭಿವೃದ್ಧಿ ಕುರಿತು ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಕೆ.ಆರ್.ಪುರಂ–ಸೆಂಟ್ರಲ್ ಸಿಲ್ಕ್ ಬೋರ್ಡ್, ಹೆಣ್ಣೂರು, ಹೆಬ್ಬಾಳ ಹಾಗೂ ವಿಮಾನ ನಿಲ್ದಾಣದವರೆಗೆ ಹಂತ ಹಂತವಾಗಿ 58.19 ಕಿ.ಮೀ. ವ್ಯಾಪ್ತಿಯ ಬ್ಲೂ ಲೈನ್ ಯೋಜನೆ 2024ರೊಳಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಈಗ ಅಕ್ಟೋಬರ್‌ನಲ್ಲಿ ಟ್ರಯಲ್ ರನ್ ಆರಂಭಿಸಿ, 2027ರಲ್ಲಿ ವಾಣಿಜ್ಯ ಸೇವೆ ಆರಂಭಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಹೊರವರ್ತುಲ ರಸ್ತೆಯ 17 ಕಿ.ಮೀ. ವ್ಯಾಪ್ತಿಯ ಮರುಅಭಿವೃದ್ಧಿಗೆ ಸರ್ಕಾರ ರೂ.450 ಕೋಟಿ ಮೀಸಲಿಟ್ಟಿದ್ದು, ಈ ಯೋಜನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.

ಸಲಹೆಗಾರರು ವಿನ್ಯಾಸವನ್ನು ಸಿದ್ಧಪಡಿಸಿದ್ದರೂ, ಯೋಜನೆಯ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಂದಲೂ ಸಲಹೆಗಳನ್ನು ಆಹ್ವಾನಿಸಲಾಗಿದೆ. ಕರಡು ವಿನ್ಯಾಸವನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗುವುದು. ಉಪಯುಕ್ತ ಸಲಹೆಗಳನ್ನು ಅಂತಿಮ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮೆಟ್ರೋವೇ ಅತ್ಯುತ್ತಮ ಪರಿಹಾರವಾಗಿದೆ. ಹೆಚ್ಚಿನ ವಾಹನ ಸಂಚಾರ, ಸಂಕೀರ್ಣ ಜಂಕ್ಷನ್‌ಗಳು ಹಾಗೂ ವಿವಿಧ ದಿಕ್ಕುಗಳ ವಾಹನಗಳ ಚಲನೆಯಿಂದ ಈ ಮಾರ್ಗದಲ್ಲಿ ಸಂಚಾರ ನಿರ್ವಹಣೆ ಸವಾಲಾಗಿದೆ. ಆದ್ದರಿಂದ ಮೆಟ್ರೋಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಕಳೆದ 30 ವರ್ಷಗಳಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣ, ಕಿರಿದಾದ 20 ಅಡಿ ರಸ್ತೆಗಳಲ್ಲೇ ಬಹುಮಹಡಿ ಕಟ್ಟಡಗಳ ನಿರ್ಮಾಣ ಹಾಗೂ ನಾಗರಿಕ ಸೌಲಭ್ಯಗಳಿಗೆ ಜಾಗ ಮೀಸಲಿಡದೆ ಬಡಾವಣೆಗಳನ್ನು ಅಭಿವೃದ್ಧಿಪಡಿಸಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಆದ್ದರಿಂದ ಈ ಮಾರ್ಗದ ಮರುಅಭಿವೃದ್ಧಿಗೆ ಹೊಸ ದೃಷ್ಟಿಕೋನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಗ್ರೇಡ್ ಸೆಪರೇಟರ್ ನಿರ್ಮಾಣದಂತಹ ಕೆಲವು ಸಲಹೆಗಳು ದುಬಾರಿಯಾಗಿದ್ದು, ಭೂಸ್ವಾಧೀನವೂ ದೊಡ್ಡ ಸವಾಲಾಗಿದೆ. ಅಲ್ಲದೆ, ಸಂಕೀರ್ಣ ಜಂಕ್ಷನ್‌ಗಳಲ್ಲಿ ವಾಹನ ಸಂಚಾರವನ್ನು ಸುಗಮಗೊಳಿಸುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ನಗರದಲ್ಲಿ ನಿರಂತರ ಮತ್ತು ಗುಣಮಟ್ಟದ ಪಾದಚಾರಿ ಮಾರ್ಗಗಳ ಕೊರತೆಯಿಂದ ಕೇವಲ 2 ಕಿ.ಮೀ. ದೂರವನ್ನೂ ಜನರು ನಡೆದು ಹೋಗುವ ಬದಲು ವಾಹನಗಳನ್ನು ಅವಲಂಬಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಸರಿಪಡಿಸಿದರೆ ಸಂಚಾರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದರು.

ಕಳೆದ 15 ದಿನಗಳಿಂದ ಅಧಿಕಾರಿಗಳೊಂದಿಗೆ ರಾತ್ರಿ ವೇಳೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುವುದಾಗಿಯೂ ಸಚಿವರು ತಿಳಿಸಿದರು.

ಹೊಸ ಕರಡು ವಿನ್ಯಾಸದ ಪ್ರಮುಖ ಅಂಶಗಳು...

  • ಕನಿಷ್ಠ 10 ಅಡಿ ಅಗಲದ, ಗ್ರಾನೈಟ್‌ನಿಂದ ನಿರ್ಮಿತ ಗುಣಮಟ್ಟದ ಪಾದಚಾರಿ ಮಾರ್ಗಗಳು.

  • ಸೈಕಲ್ ಟ್ರ್ಯಾಕ್, ಬಸ್ ಬೇ ಹಾಗೂ ಸ್ಕೈವಾಕ್‌ಗೆ ಸಂಪರ್ಕ ಕಲ್ಪಿಸುವ ಎತ್ತರದ ಪಾದಚಾರಿ ಸೇತುವೆಗಳು.

  • ಜಂಕ್ಷನ್‌ಗಳ ಮರು ವಿನ್ಯಾಸ ಹಾಗೂ ಸ್ಕೈವಾಕ್‌ಗಳ ಮೇಲ್ದರ್ಜೆಗೇರಿಸುವಿಕೆ.

  • ರಸ್ತೆ ಗುಣಮಟ್ಟ ಕಾಪಾಡಲು ವಾರ್ಷಿಕ ವೇತನ ಪಾವತಿ ಮಾದರಿ ಜಾರಿ. ರಸ್ತೆ, ದೀಪಗಳು ಹಾಗೂ ಪಾದಚಾರಿ ಮಾರ್ಗಗಳ ಗುಣಮಟ್ಟವನ್ನು ವಾರ್ಷಿಕವಾಗಿ ಪರಿಶೀಲಿಸಿ, ಗುತ್ತಿಗೆದಾರರಿಗೆ ಹಂತ ಹಂತವಾಗಿ ಪಾವತಿ.

  • ಪ್ರಮುಖ ರಸ್ತೆಗಳಲ್ಲಿ ಡಾಂಬರು ಅಥವಾ ವೈಟ್ ಟಾಪಿಂಗ್ ಅಳವಡಿಕೆ. ವೈಟ್ ಟಾಪಿಂಗ್‌ನಿಂದ ರಸ್ತೆ ಸುಮಾರು 25 ವರ್ಷಗಳವರೆಗೆ ಬಾಳಿಕೆ ಬರುತ್ತದೆ.

  • ಮಳೆನೀರು ಚರಂಡಿ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಹಾಗೂ ಅನಿಲ ಪೈಪ್‌ಲೈನ್ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಸಮನ್ವಯದಲ್ಲಿ ಕೈಗೊಳ್ಳುವುದು.

  • ಸಾರ್ವಜನಿಕ ಶೌಚಾಲಯ, ವಾಹನ ನಿಲುಗಡೆ, ಬಸ್ ನಿಲ್ದಾಣ ಹಾಗೂ ಇತರೆ ನಾಗರಿಕ ಸೌಲಭ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ವಿಸ್ತರಣೆ: CM ಡಿ.ಕೆ. ಶಿವಕುಮಾರ್-ಕಾಂಗ್ರೆಸ್ ನಾಯಕರು ನಾಳೆ ಸಂಜೆ ದೆಹಲಿಗೆ; ಹೈಕಮಾಂಡ್ ಮಹತ್ವದ ಮಾತುಕತೆ

ಯಾರ ಒತ್ತಡಕ್ಕೂ ಮಣಿದು ಬರ ಘೋಷಿಸಲ್ಲ, ಮಾತುಕತೆಯಲ್ಲೇ ಮೇಕದಾಟು ವಿವಾದಕ್ಕೆ ಪರಿಹಾರ: ಸಿಎಂ ಡಿಕೆ.ಶಿವಕುಮಾರ್

ಅಸಮರ್ಥ-ಭ್ರಷ್ಟ ಸರ್ಕಾರ ಕಿತ್ತೊಗೆಯುವವರೆಗೆ ವಿರಮಿಸದಿರಿ, ಹೋರಾಟ ಮುಂದುವರೆಸಿ: ವಿದ್ಯಾರ್ಥಿ-ಯುವಜನರಿಗೆ ಸಿದ್ದರಾಮಯ್ಯ ಕರೆ

ಕಾಂಗ್ರೆಸ್ ರಾಜಕೀಯ ಆಟಕ್ಕೆ ಬ್ರೇಕ್ ಹಾಕಲು ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿಜಯೇಂದ್ರ

ಅಗ್ನಿಶಾಮಕ, ತುರ್ತು ಸೇವೆಗಳ ಆಧುನೀಕರಣಕ್ಕೆ ಸಮಗ್ರ ಯೋಜನೆ ರೂಪಿಸಿ: ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ