ಬೆಂಗಳೂರು: ಮಾಜಿ ಪ್ರದಾನಿ ಹೆಚ್ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ 11ನೇ ದಿನದ ಉತ್ತರ ಕ್ರಿಯಾದಿ ಕಾರ್ಯಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಸಂಬಂಧ ಮಾತನಾಡಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ,ತಾಯಿ ನಮ್ಮನ್ನಗಲಿದ್ದಾರೆ ಎಂದು ನೆನಸಿಕೊಳ್ಳಲಿಕ್ಕೂ ಸಹ ಸಾಧ್ಯವಿಲ್ಲ, ಅವರು ನಮ್ಮೊಂದಿಗಿ ಓಡಾಡಿಕೊಂಡಿದ್ದಾರೆ ಎಂಬ ಭಾವನೆ ಇದೆ. ತಾಯಿ ಭೂಮಿ ತಾಯಿಯ ಮಡಿಲನ್ನು ಸೇರಿದ್ದರೂ, ಅವರು ತಮ್ಮ ಹೃದಯದಲ್ಲಿ ಸದಾ ಇರುತ್ತಾರೆ. ನನ್ನ ಬಳಿಗೆ ಬರುವ ಸಂಕಷ್ಟದಲ್ಲಿರುವವರಲ್ಲಿ ತಾಯಿಯನ್ನು ಕಾಣುತ್ತೇನೆ ಮತ್ತು ಅವರ ಕಷ್ಟಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ತಾಯಿಯವರ ಅಂತ್ಯಕ್ರಿಯೆ ನೆರವೇರಿದಂತೆಯೇ ಉತ್ತರ ಕ್ರಿಯಾದಿ ಕಾರ್ಯವೂ ಅಚ್ಚುಕಟ್ಟಾಗಿ ನಡೆಯ ಬೇಕೆಂದು ಎಲ್ಲಾ ರೀತಿಯ ಎಚ್ಚರಿಕೆ ವಹಿಸಲಾಗಿದೆ. ಎಷ್ಟೇ ಜನರು ಬಂದರೂ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಅವರ ಅಭಿಮಾನಿಗಳು, ಜಿಲ್ಲೆಯ ಹಾಗೂ ಹೊರಗಿನ ಜನರು ಶಾಂತ ರೀತಿಯಲ್ಲಿ ಸಹಕರಿಸುವ ಮೂಲಕ ಅಮನವರ ಆತಕ್ಕೆ ಶಾಂತಿ ಕೋರಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಹೊಳೆ ನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ದಿ.ಚನ್ನಮ ಅವರ ಉತ್ತರ ಕ್ರಿಯಾದಿ ಕಾರ್ಯ ನಡೆಯಲಿದೆ.
ಜು.18ರಂದು ನಿಧನರಾಗಿದ್ದ ಚನ್ನಮ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ನೆರವೇರಿಸಲಾಗಿತ್ತು. ಚನ್ನಮ ಅವರ ಸಮಾಧಿಯ ಸ್ಥಳದಲ್ಲಿ 11 ದಿನದ ಕಾರ್ಯಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಪಾರ್ಕಿಂಗ್ ವ್ಯವಸ್ಥೆ, ಊಟಕ್ಕಾಗಿ ಪ್ರತ್ಯೇಕ ಆಸನ ಮತ್ತು ಕೌಂಟರ್‌ಗಳನ್ನು ತೆರೆಯಲಾಗಿದೆ.
ಸುಮಾರು ಆರು ವಿಧದ ಸಿಹಿ ತಿಂಡಿಗಳು ಸೇರಿದಂತೆ ರುಚಿಕರವಾದ ಅಡುಗೆ ತಯಾರಾಗುತ್ತಿದೆ. ಸಾಮಾನ್ಯರು, ಗಣ್ಯರು ಸೇರಿದಂತೆ ಪ್ರತ್ಯೇಕವಾಗಿ 16 ಕೌಂಟರ್ ತೆರಲಾಗಿದ್ದು, ಒಂದೂವರೆ ಸಾವಿರ ಅಡುಗೆ ಭಟ್ಟರು ವಿಧವಿಧದ ಅಡುಗೆ ತಯಾರು ಮಾಡಲಿದ್ದಾರೆ. ಕಾರ್ಯ ನಡೆಯುವ ಒಂದು ಕಿಮೀ ದೂರದಿಂದಲೇ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ವಿಐಪಿ ಮಾರ್ಗ ಮತ್ತು ಪಾರ್ಕಿಂಗ್ ಸ್ಥಳ, ಸಾರ್ವಜನಿಕ ಮಾರ್ಗ, ಊಟದ ಸ್ಥಳಕ್ಕೆ ದಾರಿ, ಕಡ್ಡಾಯವಾಗಿ ಎಡಕ್ಕೆ ಪಾರ್ಕಿಂಗ್, ಮಹಿಳೆಯರ ಊಟದ ವ್ಯವಸ್ಥೆ, ಬೈಕ್ ಹಾಗೂ ಕಾರು ನಿಲುಗಡೆಗೆ ಪ್ರತ್ಯೇಕ ಮಾರ್ಗ ವಿಐಪಿ, ಮಹಿಳೆಯರು ಹಾಗೂ ಸಾರ್ವಜನಿಕರ ಊಟಕ್ಕೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ.
ಪಾರ್ಕಿಂಗ್‌ಗಾಗಿ ಹಾಸನ ಕಡೆಯಿಂದ ಹೋಗುವವರಿಗೆ ಹೆದ್ದಾರಿ ಎದುರು, ಎಡಭಾಗ, ಹರಿಹರ ಪುರ ಕಡೆಯಿಂದ ಬರುವವರಿಗೆ ಮೊರಾರ್ಜಿ ವಸತಿ ಶಾಲೆ ಸುತ್ತಮುತ್ತ, ನೀರಿನ ಟ್ಯಾಂಕ್ ಪಕ್ಕ, ಹೆಲಿಪ್ಯಾಡ್ ಬಳಿ, ಹರದನಹಳ್ಳಿ ಸರ್ಕಾರಿ ಸಂಯುಕ್ತ ಶಾಲೆ ಮೊದಲಾದ ಹತ್ತಕ್ಕೂ ಕಡೆಗಳಲ್ಲಿ ಪಾರ್ಕಿಂಗ್ ಸ್ಥಳ ಗೊತ್ತು ಮಾಡಲಾಗಿದೆ.