ಬೆಂಗಳೂರು: ಕರ್ನಾಟಕ ಸರ್ಕಾರವು Kaveri 3.0 ವ್ಯವಸ್ಥೆಯ ನವೀಕರಿಸಿದ ಆವೃತ್ತಿಯ ಮೂಲಕ ಆನ್ ಲೈನ್ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಪರಿಚಯಿಸಲು ಯೋಜಿಸಿದ್ದು, ಇದು ಮನೆ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಿ, ದಾಖಲೆಗಳ ಕೆಲಸವನ್ನು ಕಡಿಮೆ ಮಾಡಿ, ಡೆವಲಪರ್‌ಗಳಿಗೆ ಯೋಜನೆ ಹಸ್ತಾಂತರವನ್ನು ವೇಗವಾಗಿ ಪೂರ್ಣಗೊಳಿಸಲು ಸಹಾಯ ಮಾಡುವ ನಿರೀಕ್ಷೆಯಿದೆ.
ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, ಸುಮಾರು 65 ಕೋಟಿ ರೂಪಯಿ ವೆಚ್ಚದ AI ಆಧಾರಿತ ಕಾವೇರಿ 3.0 ಪ್ಲಾಟ್‌ಫಾರ್ಮ್ ನ್ನು ಆರಂಭಿಸಲಾಗುವುದು ಎಂದು ಹೇಳಿದರು. ಇದು ಕಾಗದರಹಿತ ಮತ್ತು ಸಂಪೂರ್ಣ ಡಿಜಿಟಲ್ ಆಸ್ತಿ ನೋಂದಣಿ ವ್ಯವಸ್ಥೆ ಒದಗಿಸುವ ಉದ್ದೇಶ ಹೊಂದಿದೆ.
ಈ ಸುಧಾರಣೆಯ ಭಾಗವಾಗಿ 207 ಉಪ-ನೋಂದಣಾಧಿಕಾರಿ ಕಚೇರಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ ಹಾಗೂ “ಮೆಗಾ ನೋಂದಣಿ ಕೇಂದ್ರಗಳು” ಸ್ಥಾಪಿಸಲು ಯೋಜಿಸಲಾಗಿದೆ. 2025-26 ಹಣಕಾಸು ವರ್ಷದಲ್ಲಿ ಸ್ಟಾಂಪ್ ಮತ್ತು ನೋಂದಣಿ ಆದಾಯವು 22,629 ಕೋಟಿ ರೂಪಾಯಿ ತಲುಪಿದ್ದು, ಇದು 12.3% ಏರಿಕೆ ಕಂಡಿದೆ.
ಹೊಸ ವ್ಯವಸ್ಥೆಯು ಈಗಿನ ಕಾವೇರಿ ವ್ಯವಸ್ಥೆಯ ಕಾರ್ಯಾಚರಣಾ ಮಿತಿಗಳನ್ನು ನಿವಾರಿಸಿ, ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ವೇಗವಾದ, ಪಾರದರ್ಶಕ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ. ಸ್ಟಾಂಪ್ ರಚನೆ, ದಾಖಲೆ ಕರಡು, ನೋಂದಣಿ, ಡಿಜಿಟಲ್ ಸಂಗ್ರಹಣೆ, ಡಾಕ್ಯುಮೆಂಟ್ ಹಂಚಿಕೆ ಮತ್ತು ಪಡೆಯುವಿಕೆ ಸೇರಿದಂತೆ ಹಲವು ಕಾರ್ಯಗಳನ್ನು ಒಂದೇ ಆನ್‌ಲೈನ್ ಪ್ರಕ್ರಿಯೆಯಲ್ಲಿ ಒಗ್ಗೂಡಿಸಲಾಗುತ್ತದೆ.
ರಾಜ್ಯ ಸರ್ಕಾರವು 2025ರಲ್ಲಿ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿ, ವ್ಯವಹಾರದಲ್ಲಿ ಭಾಗಿಯಾಗಿರುವವರು ಉಪ-ನೋಂದಣಾಧಿಕಾರಿ ಕಚೇರಿಗೆ ನೇರವಾಗಿ ಹೋಗದೆ ಕುಳಿತಲ್ಲಿಂದಲೇ ಆಸ್ತಿ ನೋಂದಣಿ ಪೂರ್ಣಗೊಳಿಸಲು ಅವಕಾಶ ನೀಡಿದೆ.
ಈ ಬಜೆಟ್ ರಾಜ್ಯದ ‘Ease of Doing Business’ ಗುರಿಗೆ ಬಲ ನೀಡುತ್ತದೆ. ಕಾವೇರಿ 3.0 ಪಾರದರ್ಶಕತೆಯನ್ನು ಹೆಚ್ಚಿಸಿ, ಮಧ್ಯವರ್ತಿಗಳ ಅವಲಂಬನೆಯನ್ನು ಕಡಿಮೆ ಮಾಡಿ, ವಿವಿಧ ಇಲಾಖೆಗಳ ನಡುವೆ ಸಂಯೋಜಿತ ಆಸ್ತಿ ನಿರ್ವಹಣೆಯೊಂದಿಗೆ ಆನ್ ಲೈನ್ ನೋಂದಣಿಯನ್ನು ಸಾಧ್ಯವಾಗಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರವು ಮತ್ತೊಂದು ತಿದ್ದುಪಡಿಯನ್ನೂ ಪ್ರಸ್ತಾಪಿಸಿದ್ದು, ನೋಟಿಫೈ ಮಾಡಿದ ಖಾಸಗಿ ಸಂಸ್ಥೆಗಳು ರಿಮೋಟ್ ನೋಂದಣಿ ಪ್ರಕ್ರಿಯೆಯನ್ನು ನೆರವೇರಿಸಲು ಅವಕಾಶ ನೀಡಬಹುದು. ಈ ಪ್ರಸ್ತಾವನೆ ರಾಷ್ಟ್ರಪತಿ ಅನುಮೋದನೆಗೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತರೆ, ಬೃಹತ್ ಡೆವಲಪರ್‌ಗಳು ಹಾಗೂ ಸಂಸ್ಥೆಗಳು—ವಿಶೇಷವಾಗಿ Real Estate Regulatory Authority ಅನುಮೋದಿಸಿದ ಯೋಜನೆಗಳಲ್ಲಿ—ಬಹುಸಂಖ್ಯೆಯ ನೋಂದಣಿಗಳನ್ನು ವೇಗವಾಗಿ ನಡೆಸಲು ಇದು ಸಹಾಯಕವಾಗಲಿದೆ.
ಡೆವಲಪರ್‌ಗಳಿಗಾಗಿ ಈ ವ್ಯವಸ್ಥೆ ಆಡಳಿತಾತ್ಮಕ ಅಡಚಣೆಗಳನ್ನು ಕಡಿಮೆ ಮಾಡಿ, ಉಪ-ನೋಂದಣಿ ಕಚೇರಿಗಳ ಸಮಸ್ಯೆಯಿಂದ ಉಂಟಾಗುವ ವಿಳಂಬಗಳನ್ನು ತಗ್ಗಿಸಲಿದೆ. ಮನೆ ಖರೀದಿದಾರರಿಗೆ ಸಹ ಡಾಕ್ಯುಮೆಂಟ್ ಕೆಲಸ ಕಡಿಮೆ ಆಗಿ, ಕಚೇರಿಗಳಿಗೆ ಅನೇಕ ಬಾರಿ ಹೋಗುವ ಅಗತ್ಯವಿಲ್ಲದೆ, ದಾಖಲೆಗಳನ್ನು ಸುರಕ್ಷಿತವಾಗಿ ಆನ್‌ಲೈನ್‌ನಲ್ಲಿ ಸಂಗ್ರಹಿಸಿ ಪಡೆಯುವ ಅವಕಾಶ ಸಿಗಲಿದೆ ಎಂದು ಬ್ರಿಗೇಡ್ ಎಂಟರ್ಪ್ರೈಸಸ್ ನ ಎಂ ಆರ್ ಜೈಶಂಕರ್ ಹೇಳಿದರು.
“ರಿಮೋಟ್ ನೋಂದಣಿ ವ್ಯವಸ್ಥೆ ಪ್ರಕ್ರಿಯೆಯ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ GIS ಆಧಾರಿತ ಕರ್ನಾಟಕ ಲ್ಯಾಂಡ್ ಸ್ಟಾಕ್ ಭೂ ದಾಖಲೆಗಳ ಪಾರದರ್ಶಕತೆಯನ್ನು ಹೆಚ್ಚಿಸಿ, ಡೆವಲಪರ್‌ಗಳು ಮತ್ತು ಹೂಡಿಕೆದಾರರಿಗೆ ಉತ್ತಮ ದೀರ್ಘಕಾಲಿಕ ಯೋಜನೆಗೆ ನೆರವಾಗುತ್ತದೆ ಎಂದು ಶ್ರೀರಾಂ ಪ್ರಾಪರ್ಟೀಸ್ ನ ಮುರಳಿ ಮಲಯಪ್ಪನ್ ಹೇಳಿದರು.
ಡಿಜಿಟಲ್ ಸುಧಾರಣೆಗಳ ಜೊತೆಗೆ ಮೂಲಸೌಕರ್ಯ ಸುಧಾರಣೆಯನ್ನೂ ಸರ್ಕಾರ ಕೈಗೊಳ್ಳುತ್ತಿದೆ. ಕರ್ನಾಟಕದ ಉಪ-ನೋಂದಣಿ ಕಚೇರಿಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ, 2003ಕ್ಕೂ ಮುಂಚೆ ಸೃಷ್ಟಿಯಾದ ಹಳೆಯ ಆಸ್ತಿ ದಾಖಲೆಗಳನ್ನು ಡಿಜಿಟಲ್ ಆರ್ಕೈವ್ ಮಾಡಲಾಗುತ್ತದೆ.
ಪ್ರತಿ ಜಿಲ್ಲೆಯಲ್ಲಿ ಒಂದು ಉಪ-ನೋಂದಣಿ ಕಚೇರಿಯನ್ನು “Registration Guarantee Centre” ಆಗಿ ಅಭಿವೃದ್ಧಿಪಡಿಸಲಾಗುತ್ತದೆ. ಇವು ಪಾಸ್ ಪೋರ್ಟ್ ಸೇವಾ ಕೇಂದ್ರ ಮಾದರಿಯಲ್ಲಿ ಕಾರ್ಯನಿರ್ವಹಿಸಿ, ವೇಗವಾದ ಸೇವೆ ಮತ್ತು ಉತ್ತಮ ಮೂಲಸೌಕರ್ಯ ಒದಗಿಸಲಿವೆ.
ಇದರ ಜೊತೆಗೆ, ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (PPP) ಮಾದರಿಯಲ್ಲಿ ಐದು ಮೆಗಾ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.
ಆರಂಭದಲ್ಲಿ ಕೆಲವು ತಾತ್ಕಾಲಿಕ ಹೊಂದಾಣಿಕೆಗಳಿದ್ದರೂ, ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ ಆಸ್ತಿ ವ್ಯವಹಾರಗಳನ್ನು ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಮಾಡಲಿದೆ ಎಂದು ಪೂರ್ವಾಂಕರ ಲಿಮೆಟೆಡ್ ನ ಮಲ್ಲಣ್ಣ ಸಸಲು ಹೇಳಿದ್ದಾರೆ.
ಈ ಸುಧಾರಣೆಗಳು ಕರ್ನಾಟಕದ ಗೃಹ ಮಾರುಕಟ್ಟೆ—ವಿಶೇಷವಾಗಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಂಡುಬಂದಿದೆ. 2025ರಲ್ಲಿ ಸುಮಾರು 55,373 ವಸತಿ ಘಟಕಗಳು ಮಾರಾಟವಾಗಿದ್ದು, ಇದು ಭಾರತದಲ್ಲಿನ ದೊಡ್ಡ ಗೃಹ ಮಾರುಕಟ್ಟೆಗಳಲ್ಲಿ ಒಂದಾಗಿದೆ. ವರ್ಷದಲ್ಲಿ ಸರಾಸರಿ ಮನೆ ಬೆಲೆ ಪ್ರತಿ ಚದರ ಅಡಿಗೆ ಸುಮಾರು 7,388 ರೂಪಾಯಿ ತಲುಪಿದೆ.
ನೋಂದಣಿ ಪ್ರಕ್ರಿಯೆ ಸರಳಗೊಳ್ಳುವುದರಿಂದ ಆಸ್ತಿ ವ್ಯವಹಾರಗಳ ಸಂಖ್ಯೆಯೂ ಹೆಚ್ಚುವ ನಿರೀಕ್ಷೆಯಿದೆ. ಇದರ ನಡುವೆ, ರಾಜ್ಯದ ಸ್ಟಾಂಪ್ ಮತ್ತು ನೋಂದಣಿ ಇಲಾಖೆಯ ಆದಾಯವೂ ಏರಿಕೆಯಾಗುತ್ತಿದೆ. 2025-26 ಹಣಕಾಸು ವರ್ಷದ ಫೆಬ್ರವರಿವರೆಗೆ 22,629 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದು ವರ್ಷದಿಂದ ವರ್ಷಕ್ಕೆ 12.3% ಹೆಚ್ಚಳವಾಗಿದೆ. 2026-27 ಹಣಕಾಸು ವರ್ಷಕ್ಕೆ ರೂ.29,000 ಕೋಟಿ ಆದಾಯ ಗುರಿ ನಿಗದಿಪಡಿಸಲಾಗಿದೆ.
ತಜ್ಞರ ಪ್ರಕಾರ, ಸಂಪೂರ್ಣ ಡಿಜಿಟಲ್ ನೋಂದಣಿ ವ್ಯವಸ್ಥೆ ಜಾರಿಗೆ ಬಂದರೆ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗುವ ಸಾಧ್ಯತೆ ಇದೆ, ಇದು ವಿಶೇಷವಾಗಿ ಸಂಸ್ಥಾತ್ಮಕ ಹೂಡಿಕೆದಾರರು ಹಾಗೂ ವಿದೇಶದಲ್ಲಿ ವಾಸಿಸುವ ಭಾರತೀಯರಿಗೆ (NRI) ಆಸ್ತಿ ವ್ಯವಹಾರಗಳನ್ನು ಸುಲಭಗೊಳಿಸುತ್ತದೆ.