ಬೆಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ(ಕೆಜಿಎಂಒಎ) ಮತ್ತು ಇತರ ಆರೋಗ್ಯ ಇಲಾಖೆ ನೌಕರರ ಸಂಘಗಳು ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಅವರು ಎತ್ತಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಭರವಸೆ ನೀಡಿದ್ದಾರೆ.
ಕೆಜಿಎಂಒಎ ಹಂತಹಂತವಾಗಿ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ, ಮಾರ್ಚ್ 11 ರಿಂದ ಎಲ್ಲಾ ಹೊರರೋಗಿ ವಿಭಾಗ(ಒಪಿಡಿ)ದ ಸೇವೆಗಳನ್ನು ಬಂದ್ ಮಾಡುತ್ತಿದೆ.
ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ ಮಾರ್ಚ್ 16 ರಿಂದ ವೈದ್ಯರು ತುರ್ತು ಸೇವೆಗಳು ಸೇರಿದಂತೆ ಎಲ್ಲಾ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಯೋಜಿಸಿದ್ದಾರೆ.
"ನಾವು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಚರ್ಚಿಸಿದ್ದೇವೆ. ನಾವು ಅವರೊಂದಿಗೆ ಎರಡು ಬಾರಿ ಮಾತನಾಡಿದ್ದೇವೆ. ನಿನ್ನೆ, ನಮ್ಮ ಆಯುಕ್ತರ ಮೂಲಕ ಸರ್ಕಾರದ ಕ್ರಮಗಳನ್ನು ಅವರಿಗೆ ತಿಳಿಸಿದ್ದೇವೆ" ಎಂದು ದಿನೇಶ್ ಗುಂಡೂರಾವ್ ಇಂದು ವಿಧಾನಸಭೆಗೆ ತಿಳಿಸಿದರು.
"ಅವರ ಬೇಡಿಕೆಗಳಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ವೃಂದ ಹಾಗೂ ನೇಮಕಾತಿ, ಜೇಷ್ಠತಾ ಪಟ್ಟಿ ಮತ್ತು ಕಳೆದ ಕೌನ್ಸೆಲಿಂಗ್‌ನಲ್ಲಿನ ವ್ಯತ್ಯಾಸಗಳು ಸೇರಿವೆ" ಎಂದು ಅವರು ಹೇಳಿದರು.
"ನಾವು ಅವುಗಳನ್ನು ಪರಿಹರಿಸಲು ಯೋಜಿಸಿದ್ದೇವೆ. ಇನ್ನೂ ಹಲವಾರು ಸಮಸ್ಯೆಗಳಿವೆ, ನಾನು ಈಗ ಚರ್ಚಿಸಲು ಬಯಸುವುದಿಲ್ಲ. ಇಂದು ನಾವು ಮುಖ್ಯಮಂತ್ರಿಯೊಂದಿಗೆ ಸಭೆಗೆ ಅವರಿಗೆ ಕರೆದಿದ್ದೇವೆ. ಇಲಾಖೆ ಮತ್ತು ಮುಖ್ಯವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಏನು ಮಾಡಬಹುದು ಎಂಬುದನ್ನು ಚರ್ಚಿಸಿ ಪರಿಹರಿಸುತ್ತೇವೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಎಂಬ ವಿಶ್ವಾಸವಿದೆ" ಎಂದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸುನಿಲ್ ಕುಮಾರ್ ಸೇರಿದಂತೆ ಮೂವರು ಶಾಸಕರು ಎತ್ತಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
"ವಿವಿಧ ಬೇಡಿಕೆಗಳೊಂದಿಗೆ, ರಾಜ್ಯಾದ್ಯಂತ ವೈದ್ಯರು ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಔಷಧಿಗಳ ಪೂರೈಕೆ, ವರ್ಗಾವಣೆ ನೀತಿ ಮತ್ತು ಖಾಲಿ ಹುದ್ದೆಗಳ ಭರ್ತಿ ಅವರ ಪ್ರಮುಖ ಬೇಡಿಕೆಗಳಾಗಿವೆ" ಎಂದು ಅವರು ಹೇಳಿದರು.